ಕಾರವಾರ: ಮೊದಲೇ ಲಾಕ್ಡೌನ್ ಹಿನ್ನೆಲೆ ಪ್ರವಾಸಿ ತಾಣಗಳು ಬಂದ್ ಆಗಿ ಗೂಡಂಗಡಿಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದರು. ಇದೀಗ ಅವರಿಗೆ ತೌಕ್ತೆ ಚಂಡಮಾರುತ ಇನ್ನಿಲ್ಲದ ಹೊಡೆತ ನೀಡಿದ್ದು, ಮುರುಡೇಶ್ವರನ ಎದುರೇ ಬಡಪಾಯಿಗಳ ಬದುಕು ಮೂರಾಬಟ್ಟೆಯಾಗಿದೆ.
ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ತೌಕ್ತೆ ಚಂಡಮಾರುತದ ಅಬ್ಬರ ಮುರುಡೇಶ್ವರನ ಎದುರೂ ಕೂಡ ಜೋರಾಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವೆಂದೇ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿಯೂ ಕಳೆದ ಎರಡು ದಿನಗಳಿಂದ ಎಡಬಿಡದೇ ಗಾಳಿ ಸಹಿತ ಮಳೆಯಾಗುತ್ತಿದ್ದು, ಕಡಲು ಉಬ್ಬೇರಿ ಈ ಭಾಗದ ಗೂಡಂಗಡಿಕಾರರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ಪ್ರವಾಸಿಗರನ್ನೇ ನಂಬಿಕೊಂಡಿದ್ದ ಗೂಡಂಗಡಿಕಾರರು ಫಾಸ್ಟ್ ಫುಡ್, ಫ್ಯಾನ್ಸಿ ಐಟಮ್, ಬಟ್ಟೆಗಳನ್ನ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ವ್ಯಾಪಾರ ಮಾಡಲಾಗದೆ ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ ಅಂಗಡಿಯೊಳಗಿಟ್ಟು ಮನೆಯಲ್ಲಿದ್ದವರಿಗೆ ನಿನ್ನೆ ಬಂದ ತೌಕ್ತೆ ಚಂಡಮಾರುತ ಶಾಕ್ ನೀಡಿದೆ.
ಮುರುಡೇಶ್ವರ ಸಮುದ್ರದ ದಡದಲ್ಲಿ ನಿಲ್ಲಿಸಿಟ್ಟಿದ್ದ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ಸಮುದ್ರ ಸೇರಿದ್ದು, ಅದರಲ್ಲಿದ್ದ ಲಕ್ಷಗಟ್ಟಲೆ ಸಾಮಗ್ರಿಗಳು ಸಮುದ್ರ ಪಾಲಾಗಿವೆ. ರಂಜಾನ್ ಹಬ್ಬವಿದೆ, ಜನ ಹೆಚ್ಚು ಬರ್ತಾರೆ ಎಂದು ತಿಂಗಳ ಹಿಂದೆ ಸಾಮಗ್ರಿಗಳನ್ನೆಲ್ಲ ಖರೀದಿಸಿಟ್ಟಿದ್ವಿ. ಲಾಕ್ಡೌನ್ ನಲ್ಲಿ ಹೊರಗೆ ಬಂದ್ರೆ ಪೊಲೀಸರು ಬರ್ತಾರೆ ಅಂತ ಆಚೆ ಬರದೇ ಮನೆಯಲ್ಲೇ ಇದ್ದೆವು. ಈಗ ರಾತ್ರೋರಾತ್ರಿ ಅಂಗಡಿಗಳೆಲ್ಲ ನೀರು ಪಾಲಾಗಿವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ವ್ಯಾಪಾರಿಗಳು.
ತೌಕ್ತೆ ಚಂಡಮಾರುತದಿಂದ ಕಂಗಾಲಾದ ವ್ಯಾಪಾರಿಗಳು ಸಮುದ್ರ ತೀರಗಳತ್ತ ಧಾವಿಸಿದ್ದು, ಸಮುದ್ರ ಪಾಲಾದ ಅಂಗಡಿಗಳನ್ನು ಎತ್ತಿ ಮತ್ತೆ ದಡದಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಭಟ್ಕಳದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ನಿನ್ನೆಯಿಂದ ಬಿಟ್ಟು ಬಿಡದೆ ಬೀಸುತ್ತಿರುವ ಗಾಳಿ ಸಹಿತ ಮಳೆಗೆ ತಾಲೂಕಿನ ಪಾವಿನಕುರ್ವಾ, ಜಾಲಿ, ಬಂದರು ಪ್ರದೇಶ, ಸೇರಿದಂತೆ ಹಲವು ಗ್ರಾಮದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.