ಬಂಟ್ವಾಳ: ಚುನಾವಣೆ ನಡೆದು ಎರಡು ವರ್ಷಗಳ ಬಳಿಕ ಬಂಟ್ವಾಳ ಪುರಸಭೆ ಸಹಿತ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆಗೆ ಅಧಿಕಾರ ದೊರೆಯಲಿದೆ. ಅಧ್ಯಕ್ಷತೆಗೆ ಚುನಾಯಿತರಾದ ಎಲ್ಲ 27 ಮಂದಿ ಅರ್ಹರು ಎಂಬುದೇ ಈಗ ಕುತೂಹಲಕಾರಿ ಅಂಶವಾಗಿದೆ. ಏಕೆಂದರೆ ಬಂಟ್ವಾಳ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿಗೆ ಲೋಕಸಭಾ ಸದಸ್ಯ ಮತ್ತು ವಿಧಾನಸಭಾ ಸದಸ್ಯರ ಮತಗಳು ಸಿಗಲಿವೆ. ಈ ಹಿನ್ನೆಲೆ ಬಿಜೆಪಿಗೆ ಅಧಿಕಾರ ಗಳಿಸುವ ಹಾದಿ ಸುಗಮವಾಗುತ್ತದೆಯಾದರೂ ಎಸ್.ಡಿ.ಪಿ.ಐ. ತಳೆಯುವ ನಿರ್ಧಾರಗಳೂ ನಿರ್ಣಾಯಕವಾಗುತ್ತವೆ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. 2018 ರಲ್ಲಿ ಚುನಾವಣೆ ನಡೆದಿದ್ದು, ಒಂದು ಬಾರಿ ಮೀಸಲಾತಿ ಪಟ್ಟಿ ಪ್ರಕಟಗೊಂಡಿತ್ತು. ಆದರೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಮತ್ತೆ ವಿಳಂಬವಾಯಿತು. ಅದಾದ ಬಳಿಕ ಮೀಸಲಾತಿ ಪಟ್ಟಿ ಮತ್ತೆ ಘೋಷಣೆಯಾಯಿತು, ಈಗ ಅದೂ ಬದಲಾಗಿದೆ. ನೂತನ ಆಡಳಿತ ಪಕ್ಷಕ್ಕೆ ಸ್ವಚ್ಛತೆ ನಿರ್ವಹಣೆ ಸಹಿತ ನೆನೆಗುದಿಗೆ ಬಿದ್ದಿರುವ ಹಲವು ಕಾಮಗಾರಿಗಳ ನಿರ್ವಹಣೆ ಪ್ರಮುಖ ಸವಾಲಾಗಲಿದೆ.