ಉತ್ತರಕನ್ನಡ: ಲಾಕ್ಡೌನ್ ನಡುವೆಯೂ ಬೆಂಗಳೂರಿನಿಂದ ಗೋಕರ್ಣಕ್ಕೆ ಪಿತೃ ಕಾರ್ಯಕ್ಕೆ ಆಗಮಿಸಿದ 7 ಜನ ಹಾಗೂ ಕಾರ್ಯಕ್ಕೆ ನೆರವಾದ ಪೂಜಾರಿ ಕುಟುಂಬವನ್ನ ಹೋಂ ಕ್ವಾರಂಟೈನ್ಗೆ ಒಳಪಡಿಸಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ಒಂದೇ ಕುಟುಂಬದ ಏಳು ಜನರು ರೋಡ್ ಪಾಸ್ ಪಡೆದು ಗೋಕರ್ಣಕ್ಕೆ ಪಿತೃ ಕಾರ್ಯಕ್ಕೆ ಆಗಮಿಸಿದ್ದರು. ನಿಯಮಗಳನ್ನು ಗಾಳಿಗೆ ತೂರಿ ಪಿತೃ ಕಾರ್ಯಕ್ಕೆ ಆಗಮಿಸಿದ ಇವರು, ಗುರುವಾರ ರಾತ್ರಿ ಗೋಕರ್ಣ ತಲುಪಿದ್ದರು. ಹೀಗೆ ಬಂದವರಿಗೆ ಗೋಕರ್ಣದ ಅರ್ಚಕ ಚಿಂತಾಮಣಿ ಉಪಾಧ್ಯ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೆ ಚಿಂತಾಮಣಿ ಉಪಾಧ್ಯರ ನೆರವಿನೊಂದಿಗೆ ಇಂದು ಬೆಳ್ಳಂಬೆಳಗ್ಗೆ ಪಿತೃ ಕಾರ್ಯ ಪೂರೈಸಿಕೊಂಡಿದ್ದರು. ಆದರೆ, ಲಾಕ್ಡೌನ್ ನಡುವೆಯೂ ಬೆಂಗಳೂರಿನಿಂದ ಆಗಮಿಸಿದ್ದಲ್ಲದೆ, ಸ್ಥಳೀಯ ಅರ್ಚಕರು ನೆರವು ನೀಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ಕೊನೆಗೆ ಪ್ರಕರಣ ಗ್ರಾಮ ಪಂಚಾಯಿತಿ ಮೆಟ್ಟಿಲೇರಿ ಎರಡು ಕುಟುಂಬಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಅದರಂತೆ ಕಾನೂನು ಉಲ್ಲಂಘಿಸಿದ ಬೆಂಗಳೂರಿನಿಂದ ಆಗಮಿಸಿದ ಏಳು ಜನ ಹಾಗೂ ಗೋಕರ್ಣದ ಅರ್ಚಕ ಚಿಂತಾಮಣಿ ಉಪಾಧ್ಯ ಮತ್ತು ಅವರ ಕುಟುಂಬವನ್ನು ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಅಲ್ಲದೆ ಎಲ್ಲರ ಕೈಗೂ ಹೋಂ ಕ್ವಾರಂಟೈನ್ ಸೀಲ್ ಹಾಕಿರೋ ಅಧಿಕಾರಿಗಳು, ಅರ್ಚಕನ ಮನೆಯಲ್ಲಿಯೇ ಸದ್ಯ ಬೆಂಗಳೂರಿನವರಿಗೂ ವಸತಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಬಳಿಕ ಬೆಂಗಳೂರಿಗೆ ಕಳುಹಿಸಿ ಅಲ್ಲೇ ಹೋಂ ಕ್ವಾರಂಟೈನ್ ಇರುವಂತೆ ಸೂಚಿಸಿದ್ದು, ಎರಡು ಕುಟುಂಬದ ವಿರುದ್ಧ ಕಾನೂನು ನಿಯಮ ಮೀರಿದ್ದಕ್ಕೆ ಕ್ರಮ ಕೈಗೊಳ್ಳೋದಾಗಿ ಕುಮಟಾ ಉಪ ವಿಭಾಗಾಧಿಕಾರಿ ಅಜಿತ್ ರೈ ಮಾಹಿತಿ ನೀಡಿದ್ದಾರೆ.