ಕಾರವಾರ : ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ಕಾರವಾರದ ಜಿಲ್ಲಾಸ್ಪತ್ರೆಯಲ್ಲೇ ಬಾಣಂತಿ ಗೀತಾ ಬಾನಾವಳಿಕರ್ ಮೃತಪಟ್ಟಿದ್ದ ಪ್ರಕರಣ ಇದೀಗ ಮತ್ತೆ ತಾಲೂಕಿನಲ್ಲಿ ಸದ್ದು ಮಾಡುತ್ತಿದೆ.
ಮಹಿಳೆ ಮೃತಪಟ್ಟು ಒಂದೂವರೆ ವರ್ಷ ಕಳೆದರೂ ಸಹ ಬಾಣಂತಿ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತಾದರೂ ಸಹ ಇದುವರೆಗೂ ವರದಿಯನ್ನ ಕುಟುಂಬಸ್ಥರಿಗೂ ನೀಡದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆಯಾಗಿದ್ದ ಬಾಣಂತಿ ಗೀತಾ ಬಾನಾವಳಿಕರ್(28 ವರ್ಷ) 2020ರ ಸೆಪ್ಟೆಂಬರ್ 3 ರಂದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಆದರೆ, ದುರಾದೃಷ್ಟವಶಾತ್ ಶಸ್ತ್ರಚಿಕಿತ್ಸೆ ವೇಳೆ ಬಾಣಂತಿ ಮೃತಪಟ್ಟಿದ್ದು, ಇದಕ್ಕೆ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಶಿವಾನಂದ ಕುಡ್ತಳಕರ್‌ನೇ ಕಾರಣ ಅಂತಾ ಆಕೆಯ ಕುಟುಂಬಸ್ಥರು ಹಾಗೂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ, ಬಾಣಂತಿ ಸಾವಿಗೆ ನ್ಯಾಯ ಕೊಡಿಸುವಂತೆ ನೂರಾರು ಸಂಖ್ಯೆಯಲ್ಲಿ ಮೀನುಗಾರ ಸಮುದಾಯದವರು ಬೃಹತ್ ಪ್ರತಿಭಟನೆಯನ್ನ ನಡೆಸುವ ಮೂಲಕ ಸರ್ಜನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಬಾಣಂತಿ ಗೀತಾ ಬಾನಾವಳಿಕರ್ ಪ್ರಕರಣ ಇದೀಗ ಮತ್ತೆ ಕಾವೇರುವ ಲಕ್ಷಣಗಳು ಕಾಣುತ್ತಿವೆ. ಸಂತಾನಹರಣ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೀತಾ ಸರ್ಜನ್ ಡಾ. ಶಿವಾನಂದ್ ಕುಡ್ತಳಕರ್ ನೀಡಿದ ಅನಸ್ತೇಶಿಯಾ ಓವರ್‌ಡೋಸ್‌ನಿಂದಾಗಿ ಮೃತಪಟ್ಟಿದ್ದ ಆರೋಪಗಳು ಕೇಳಿಬಂದಿದ್ದವು.
ಅಲ್ಲದೇ, ವೈದ್ಯನ ವರ್ಗಾವಣೆಗೆ ಆಗ್ರಹಿಸಿದ್ದು ಬಾಣಂತಿ ಸಾವಿನ ಕಾರಣ ತಿಳಿಸುವಂತೆ ಮರಣೋತ್ತರ ಪರೀಕ್ಷೆಗಾಗಿ ಒತ್ತಾಯಿಸಲಾಗಿತ್ತು. ಈ ವೇಳೆ ಅಂದಿನ ಯಡಿಯೂರಪ್ಪ ಸರ್ಕಾರ ಡಾ. ಕುಡ್ತಳಕರ್‌ನ್ನು ವರ್ಗಾವಣೆ ಮಾಡಿತ್ತು.
ಅಲ್ಲದೆ, ಉತ್ತರಕನ್ನಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯತ್‌ನ ಹಿಂದಿನ ಸಿಇಒ ಎಂ. ರೋಷನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿತ್ತು. ಆದರೆ, ಘಟನೆ ನಡೆದು ಒಂದೂವರೆ ವರ್ಷಗಳೇ ಕಳೆಯುತ್ತಾ ಬಂದರೂ ಸಹ ಇದುವರೆಗೂ ತನಿಖೆಯ ವರದಿಯಾಗಲೀ ಅಥವಾ ಮರಣೋತ್ತರ ಪರೀಕ್ಷೆಯ ವರದಿಯಾಗಲೀ ಎಲ್ಲಿಯೂ ಬಹಿರಂಗವಾಗಿಲ್ಲ.
ಬಾಣಂತಿ ಸಾವಿನ ಪ್ರಕರಣದಲ್ಲಿ ವರ್ಗಾವಣೆಗೊಂಡಿದ್ದ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಳಕರ್ ಕೇವಲ ಆರು ತಿಂಗಳಲ್ಲೇ ಮತ್ತೆ ಜಿಲ್ಲಾಸ್ಪತ್ರೆಗೆ ವಾಪಸ್ಸಾಗಿದ್ದರು. ಪ್ರಕರಣ ಸಂಬಂಧ ಆರೋಪ ಇದ್ದರೂ ಸಹ ತನಿಖೆ ಪೂರ್ಣಗೊಂಡು ವರದಿ ಬರುವ ಮೊದಲೇ ವೈದ್ಯ ಮತ್ತೆ ತನ್ನ ಸ್ಥಾನಕ್ಕೆ ಮರಳಿದ್ದು ಹಲವು ಅನುಮಾನಗಳಿಗೂ ಕಾರಣವಾಗಿತ್ತು.
ಅಲ್ಲದೇ, ವೈದ್ಯನ ಮೇಲೆ ಭ್ರಷ್ಟಾಚಾರದ ಆರೋಪಗಳು ಸಹ ಕೇಳಿಬಂದಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಆರೋಗ್ಯ ಸಚಿವರಿಗೇ ದೂರು ನೀಡಿದರೂ ಸಹ ವೈದ್ಯನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ ಮೃತ ಬಾಣಂತಿ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ವರದಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಈ ಬಗ್ಗೆ ಸ್ಥಳೀಯ ಶಾಸಕಿಯವರನ್ನ ಕೇಳಿದ್ರೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪ್ರಕರಣದ ಕುರಿತು ಮುಚ್ಚಿಡುವ ಪ್ರಯತ್ನ ನಡೆಸಿರುವುದು ಗಮನಕ್ಕೆ ಬಂದಿದೆ. ಬಾಣಂತಿ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಅಂತಾ ತಿಳಿಸಿದ್ದಾರೆ.
ಒಟ್ಟಾರೇ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಣಂತಿ ಮೃತಪಟ್ಟು ಒಂದೂವರೆ ವರ್ಷ ಕಳೆದಿದ್ದರೂ ಸಹ ಇದುವರೆಗೂ ಸಾವಿಗೆ ಕಾರಣ ತಿಳಿಯದಿರುವುದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಮೃತ ಬಾಣಂತಿ ಸಾವಿಗೆ ನ್ಯಾಯ ಒದಗಿಸಿಕೊಡಬೇಕಿದೆ.
ಓದಿ: ಸದ್ಯಕ್ಕೆ ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ: ಯೂಟರ್ನ್ ಹೊಡೆದ ಸಿಎಂ ಇಬ್ರಾಹಿಂ..