ಕಾರವಾರ: ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಜೊತೆಗೆ ಅವುಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮ ಸಹ ಕೈಗೊಂಡಿದ್ದು, ಇದೀಗ ಯೋಜನೆಗಳ ಕುರಿತು ಜಾಗೃತಿಗಾಗಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಸ್ಕೇಟಿಂಗ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಮಿಕ ಯೋಜನೆಗಳ ಜಾಗೃತಿಗೆ ಕಾರವಾರದಿಂದ ಬೆಂಗಳೂರಿಗೆ ಸ್ಕೇಟಿಂಗ್ ಅಭಿಯಾನ ಆರಂಭಿಸಲಾಗಿದೆ.
ಇದೇ ಮೊದಲ ಬಾರಿಗೆ ಸ್ಕೇಟಿಂಗ್ ಮೂಲಕ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಉತ್ತರಕನ್ನಡದಲ್ಲಿ ಕಾರ್ಮಿಕ ಇಲಾಖೆ ಮುಂದಾಗಿದೆ. ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಜಿಲ್ಲಾಕೇಂದ್ರದಲ್ಲಿ ಚಾಲನೆ ಸಿಕ್ಕಿದೆ. 40 ಮಂದಿ ಸ್ಕೇಟಿಂಗ್ ವಿದ್ಯಾರ್ಥಿಗಳು ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್‌ನಲ್ಲಿ ತೆರಳುವುದರೊಂದಿಗೆ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಕಾರವಾರದಿಂದ ಬೆಂಗಳೂರಿನವರೆಗೆ ಸುಮಾರು 600 ಕಿಲೋ ಮೀಟರ್ ದೂರದವರೆಗೆ ವಿದ್ಯಾರ್ಥಿಗಳ ತಂಡ ಸ್ಕೇಟಿಂಗ್ ಮೂಲಕ ತೆರಳಲಿದ್ದಾರೆ.
ಕಾರವಾರದಿಂದ ಆರಂಭವಾಗಿ ಯಲ್ಲಾಪುರ, ಶಿರಸಿ, ಶಿವಮೊಗ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದ್ದಾರೆ. ಈ ವೇಳೆ ಸಂಚರಿಸುವ ಮಾರ್ಗಗಳಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತ ಫಲಕಗಳನ್ನ ಸ್ಕೇಟಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಕಾರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭವಾದ ಈ ಸ್ಕೇಟಿಂಗ್ ಜಾಗೃತಿ ರ‍್ಯಾಲಿಗೆ ಜಿಲ್ಲಾ ಪಂಚಾಯತ್ ಸಿಇಓ ಎಂ.ಪ್ರಿಯಾಂಗಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಜಾಗೃತಿ ರ‍್ಯಾಲಿಯಲ್ಲಿ ಕಾರವಾರದ 25 ಮಂದಿ ಸೇರಿ ರಾಜ್ಯದ ವಿವಿಧೆಡೆಗಳಿಂದ 40 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ 40 ಮಂದಿಯನ್ನ 10 ವಿದ್ಯಾರ್ಥಿಗಳಂತೆ 4 ತಂಡಗಳಾಗಿ ವಿಂಗಡಿಸಲಾಗಿದೆ. ಒಂದೊಂದು ತಂಡ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆವರೆಗೆ ಸ್ಕೇಟಿಂಗ್ ಮಾಡಿ ಬಸ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದು, ನಂತರ ಎರಡನೇಯ ತಂಡ ಅಲ್ಲಿಂದ ಮತ್ತೆ ಅರ್ಧಗಂಟೆ ರ‍್ಯಾಲಿ ಮುಂದುವರೆಸಿಕೊಂಡು ಹೋಗಲಿದೆ. ಹೀಗೆ ನಾಲ್ಕು ತಂಡಗಳು ಒಂದಾದ ಮೇಲೆ ಒಂದರಂತೆ ಸಂಚರಿಸಲಿವೆ.
ಮೇ 12ರಂದು ಬೆಂಗಳೂರು ತಲುಪುವ ಸ್ಕೇಟಿಂಗ್ ರ‍್ಯಾಲಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬರಮಾಡಿಕೊಳ್ಳಲಿದ್ದಾರೆ. ಅಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಸಹ ವಿತರಿಸಲಿದ್ದು, ಸ್ಕೇಟಿಂಗ್ ವಿದ್ಯಾರ್ಥಿಗಳು ಸಹ ಉತ್ಸಾಹದಿಂದಲೇ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ನಡೆಯಲ್ಲ, ವಿಳಂಬ ಧೋರಣೆ ಸಹಿಸಲ್ಲ.. ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ