ಭಟ್ಕಳ: ತಾಲೂಕಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತಿದ್ದ ಆಟೋ, ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಆಟೋ ಚಾಲಕ ದೇವೇಂದ್ರ ನಾಯ್ಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಬಾಡಿಗೆಗಾಗಿ ಕಾಯುತ್ತಾ ಆಟೋದಲ್ಲಿ ಕುಳಿತಿದ್ದ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಕಾರೊಂದು ಚಲಿಸುತ್ತಿತ್ತು. ಈ ವೇಳೆ ಕಾರು ಏಕಾಏಕಿ ಆಟೋಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಕಾರನ್ನು ಪಕ್ಕಕ್ಕೆ ತಳ್ಳಿ ಆಟೋ ಚಾಲಕನನ್ನು ಸಾರ್ವಜನಿಕರು ಕಾಪಾಡಿದ್ದಾರೆ. ಅದು ಜನನಿಬಿಡ ಪ್ರದೇಶವಾಗಿದ್ದು ಬಸ್ನಿಲ್ದಾಣದಲ್ಲಿ ಪ್ರಯಾಣಿಕರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟ ಹೆಚ್ಚಿರುತ್ತದೆ. ಕಾರು ಚಾಲಕನಿಗೆ ಪಾರ್ಶ್ವವಾಯು ಉಂಟಾದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದೆ ಎನ್ನಲಾಗ್ತಿದೆ.
ಆಟೋ ಚಾಲಕ ನಗರ ಠಾಣೆ ಮೆಟ್ಟಿಲೇರಿದ್ದಾರೆ. ಬಳಿಕ ಮಾತುಕತೆ ನಡೆಸಿ ಠಾಣೆಯಲ್ಲೇ ರಾಜಿ ಮಾಡಲಾಗಿದೆ. ಕಾರಿನ ಚಾಲಕ ಆಟೋ ಹಾಗೂ ಬೈಕ್ಗೆ ಆದ ನಷ್ಟಕ್ಕೆ ಪರಿಹಾರ ನೀಡಿದ್ದಾರೆ.