ಕಾರವಾರ: ಚೆಸ್ ಪೀಸ್‌ಗಳನ್ನು ಅತಿ ಕಡಿಮೆ ಅವಧಿಯಲ್ಲಿ ಜೋಡಿಸುವ ಮೂಲಕ ಕರಾವಳಿಯ ಪುಟ್ಟ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಕುಮಟಾ ತಾಲೂಕಿನ ಕೂಜಳ್ಳಿಯ ಮಲ್ಲಾಪುರ ಗ್ರಾಮದ ಯೋಗೇಶ್ ಹಾಗೂ ಜಯಲಕ್ಷ್ಮೀ ಭಟ್ ದಂಪತಿಯ ಪುತ್ರಿ ಧೀಮಹಿ ಈ ಸಾಧನೆ ಮಾಡಿದ್ದಾರೆ.
ಚೆಸ್ ಪೀಸ್ ಸರಸರನೇ ಜೋಡಿಸುತ್ತಾಳೆ:
ಚೆಸ್ ಪೀಸ್‌ಗಳನ್ನು ಜೋಡಿಸುವುದಷ್ಟೇ ಅಲ್ಲದೆ 2 ವರ್ಷ ಐದು ತಿಂಗಳ ಧೀಮಹಿ ವಿವಿಧ ಬಗೆಯ ಹಣ್ಣುಗಳು, ಆಕಾರಗಳನ್ನ ಗುರುತಿಸುವಲ್ಲಿಯೂ ಗಮನ ಸೆಳೆದಿದ್ದಾಳೆ. ಈಕೆಗೆ ಚೆಸ್‌ಬೋರ್ಡ್ ಸಿಕ್ಕರೆ ಸಾಕು, ಎಲ್ಲಾ ಚೆಸ್ ಪೀಸ್‌ಗಳನ್ನ ಸರಸರನೇ ಅವುಗಳ ಸ್ಥಾನದಲ್ಲೇ ಜೋಡಿಸಿ, ಅದರಲ್ಲಿರುವ ಪೀಸ್‌ಗಳು ಯಾವುವು ಎಂಬುದನ್ನೂ ಗುರುತಿಸುತ್ತಾಳೆ. ಅಷ್ಟೇ ಅಲ್ಲ, ದೊಡ್ಡವರಿಗೂ ಕೊಂಚ ಕಷ್ಟ ಎನಿಸುವ ಈ ಚೆಸ್ ಆಟವನ್ನು ಧೀಮಹಿ ಸರಾಗವಾಗಿ ಆಡುತ್ತಾಳೆ.
ಕಿರಿಯ ವಯಸ್ಸಿನಲ್ಲೇ ಸಾಧನೆ:
ಈಕೆಯ ಈ ಟ್ಯಾಲೆಂಟ್‌ನ್ನ ಗುರುತಿಸಿದ ಪಾಲಕರು ಆಕೆಯ ಚೆಸ್‌ಬೋರ್ಡ್ ಪೀಸ್ ಜೋಡಿಸುವಿಕೆಯನ್ನ ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಕಳುಹಿಸಿದ್ದರು. ಅದರಲ್ಲಿ ಆಕೆ ಕೇವಲ 2 ನಿಮಿಷ 35 ಸೆಕೆಂಡ್‌ಗಳಲ್ಲಿ ಚೆಸ್ ಪೀಸ್‌ಗಳನ್ನ ಜೋಡಿಸುವ ಮೂಲಕ ಯಂಗೆಸ್ಟ್ ಚೆಸ್‌ಪೀಸ್ ಅರೇಂಜರ್ ಎಂಬ ಟೈಟಲ್ ಮೂಲಕ ತನ್ನ ಹೆಸರನ್ನ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವಂತೆ ಮಾಡಿದ್ದಾಳೆ. ಕಿರಿಯ ವಯಸ್ಸಿನಲ್ಲೇ ಪುತ್ರಿಯ ಈ ಸಾಧನೆ ಪಾಲಕರನ್ನ ಹೆಮ್ಮೆ ಪಡುವಂತೆ ಮಾಡಿದೆ.
ಪುಟಾಣಿ ಧೀಮಹಿಯದ್ದು ಇನ್ನೂ ಆಟ ಆಡುವ ವಯಸ್ಸೇ ಆಗಿದ್ದರೂ ಸಹ ಚೆಸ್ ಆಡುವ ವಯಸ್ಸೇನಲ್ಲ. ಆದರೆ ಮನೆಯಲ್ಲಿದ್ದ ಚೆಸ್‌ಬೋರ್ಡ್‌ನತ್ತ ತಮ್ಮ ಮಗಳು ಆಕರ್ಷಿತಳಾಗಿದ್ದನ್ನ ಕಂಡ ಪಾಲಕರು ಆಕೆಗೆ ಅದನ್ನು ಕಲಿಯುವ ನಿಟ್ಟಿನಲ್ಲಿ ಸಹಕರಿಸಿದ್ದರು. ಈ ಆಟವನ್ನು ಕಲಿತುಕೊಳ್ಳುವಲ್ಲಿ ಪುಟಾಣಿ ಯಶಸ್ವಿಯಾಗಿದ್ದು, ಹೇಳಿಕೊಟ್ಟಿದ್ದನ್ನ ಅಷ್ಟೇ ಕರಾರುವಕ್ಕಾಗಿ ನೆನಪಿನಲ್ಲಿಟ್ಟುಕೊಂಡು ತಿರುಗಿ ಹೇಳುವುದನ್ನ ರೂಢಿಸಿಕೊಂಡಿದ್ದಳು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಧೀಮಹಿ ಇಂಥ ದೊಡ್ಡ ಸಾಧನೆಗಳನ್ನ ಮಾಡಿರುವುದು ನಿಜಕ್ಕೂ ಎಂಥವರನ್ನೂ ಬೆರಗಾಗಿಸುವಂತಿದೆ.
ಈಕೆಯ ಇನ್ನೊಂದು ವಿಶೇಷ ಅಂದ್ರೆ, ಸಂಸ್ಕೃತ ಶ್ಲೋಕಗಳನ್ನೂ ಅರಳು ಹುರಿದಂತೆ ಹೇಳುತ್ತಾಳೆ. ಭಗವದ್ಗೀತೆಯ ಶ್ಲೋಕಗಳನ್ನು ಸರಾಗವಾಗಿ ಪಠಿಸುತ್ತಾಳೆ. ಜೊತೆಗೆ ವಿವಿಧ ಬಗೆಯ ಹಣ್ಣುಗಳು, ತರಕಾರಿಗಳು ಹಾಗೂ ಬಗೆ ಬಗೆಯ ಆಕೃತಿಗಳ ಕಾರ್ಡ್‌ಗಳನ್ನು ವೀಕ್ಷಿಸಿ ಅವುಗಳನ್ನ ಹೆಸರಿಸುವ ಚಾಕಚಕ್ಯತೆ ಸಹ ಧೀಮಹಿಗೆ ರೂಢಿಯಾಗಿದೆ. ಈ ಎಲ್ಲ ಬಗೆಯ ಟ್ಯಾಲೆಂಟ್‌ಗಳು ತನ್ನ ತಾಯಿ ಜಯಲಕ್ಷ್ಮೀ ಭಟ್ ಅವರಿಂದ ಕಲಿತಿದ್ದು, ಹೇಳಿಕೊಟ್ಟಿದ್ದನ್ನು ಅಷ್ಟೇ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಕಲಿತಿದ್ದಾಳೆ ಧೀಮಹಿ.
ಮನೆಯಲ್ಲಿ ಅಮ್ಮ ಪೂಜೆ ಮಾಡುವ ವೇಳೆ ಹೇಳುವ ಶ್ಲೋಕ, ಭಗವದ್ಗೀತೆಯ ಶ್ಲೋಕಗಳನ್ನು ಧೀಮಹಿ ತಾನಾಗೇ ಕಲಿತುಕೊಂಡು, ಸರಾಗವಾಗಿ ಅವುಗಳನ್ನ ಹೇಳಲು ಕಲಿತಿದ್ದಾಳೆ ಅಂತಾ ಸಂತಸ ವ್ಯಕ್ತಪಡಿಸುತ್ತಾರೆ ಆಕೆಯ ತಾಯಿ ಜಯಲಕ್ಷ್ಮೀ ಭಟ್.
ಇದನ್ನೂ ಓದಿ: ಕಾರವಾರ: ಸ್ಫೋಟಕ ಸಾಗಣೆ ಇಬ್ಬರ ಬಂಧನ !