ಕಾರವಾರ: ಕುಡಿದ ಅಮಲಿನಲ್ಲಿ ನೌಕಾನಲೆ ಸಿಬ್ಬಂದಿ ಬೀಚ್ ಲೈಫ್ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆದಿದೆ.
ಮುಂಬೈ ಮೂಲದ ಸುನೀಲ್ ಚೌದರಿ, ಕಮಲೇಶ್ ಯಾದವ್, ಕಮಲ್ ಕಿಶೋರ್, ಸತ್ಯೇಂದ್ರ ಖುಶ್ವಾಹ ಹಲ್ಲೆ ನಡೆಸಿದ ಆರೋಪಿಗಳು. ಮುಂಬೈ ಮೂಲದ ಶಿಪ್ವೊಂದರಲ್ಲಿ ಕರ್ತವ್ಯದ ಮೇಲೆ ಕದಂಬ ನೌಕಾನೆಲೆಗೆ ಆಗಮಿಸಿದ್ದ ನಾಲ್ವರು,ಇಂದು ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಆಗಮಿಸಿದ್ದರು. ಕುಡಿದ ಅಮಲಿನಲ್ಲಿ ಸಮುದ್ರಕ್ಕಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದವರಿಗೆ ಲೈಫ್ಗಾರ್ಡ್ ಚಂದನ ಜೋಸಿ ಎಚ್ಚರಿಸಿದ್ದರು.
ಆದರೆ, ಇದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನೀರಿನಲ್ಲಿ ಈಜುತ್ತ ಮುಂದೆ ತೆರಳುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ ಕುಪಿತಗೊಂಡ ನೌಕಾನೆಲೆ ಸಿಬ್ಬಂದಿ, ಲೈಫ್ಗಾರ್ಡ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಬೀಚ್ ಇನ್ಚಾರ್ಜ್ ನಿವೃತ್ತ ಸೈನಿಕ ಸತ್ಯಜಿತ್ ಪಡವಾಳಕರ್ ಮೇಲೂ ಹಲ್ಲೆ ಮಾಡಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.