ಕಾರವಾರ: ಆತ ಬೇಟೆಗೆಂದು ಮನೆಯಿಂದ ಹೋದವನು ಮೂರು ದಿನವಾದರೂ ವಾಪಸ್ಸಾಗಿರಲಿಲ್ಲ. ಗಂಡನಿಗಾಗಿ ಕಾದು ಆತಂಕಗೊಂಡ ಪತ್ನಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಳು. ನಾಪತ್ತೆ ಪ್ರಕರಣವೆಂದು ತನಿಖೆಗಿಳಿದ ಪೊಲೀಸರಿಗೆ ಒಂದೊಂದೇ ವಿಚಾರಗಳು ಹೊರಬಂದು ಕೊನೆಗೆ ಇದು ನಾಪತ್ತೆಯಲ್ಲ ಹತ್ಯೆ ಎಂಬ ಸತ್ಯ ಸಂಗತಿ ತಿಳಿದು ಬರುತ್ತೆ.
ಜೂನ್ 14 ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಗೆ ಆಗಮಿಸಿದ ತಾಲೂಕಿನ ಚಿಕ್ಕಮಾವಳ್ಳಿ ಗ್ರಾಮದ ನಿವಾಸಿ ಶ್ವೇತಾ ನಾಯ್ಕ ತನ್ನ ಪತಿ ರಾಜೇಶ್ ನಾಯ್ಕ ನಾಪತ್ತೆಯಾಗಿದ್ದಾಗಿ ದೂರು ನೀಡಿದ್ದಳು. ಮೂರು ದಿನಗಳ ಹಿಂದೆ ಬೇಟೆಗೆಂದು ತೆರಳಿದವರು ಮನೆಗೆ ವಾಪಸ್ಸಾಗಿಲ್ಲ, ಫೋನ್ ಕರೆಗೂ ಸಿಗುತ್ತಿಲ್ಲ ಅಂತಾ ಪೊಲೀಸರಿಗೆ ತಿಳಿಸಿದ್ದಳು.
ಅದರಂತೆ ಮಾಹಿತಿ ಪಡೆದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆದ್ರೆ ತನಿಖೆ ಕೈಗೊಂಡ ಪೊಲೀಸರಿಗೆ ಸಿಕ್ಕ ಮನೆಯವರ ಮಾಹಿತಿ ಗೊಂದಲ ಉಂಟು ಮಾಡಿತ್ತು. ಈ ಬಗ್ಗೆ ಇನ್ನಷ್ಟು ಕೆದಕಿದ ಬಳಿಕ ಸಿಕ್ಕ ಮಾಹಿತಿ ನಿಜಕ್ಕೂ ಬೆಚ್ಚಿಬೀಳಿಸಿತ್ತು. ರಾಜೇಶ್ ನಾಯ್ಕ ಬೇಟೆಗೆ ತೆರಳಿದ್ದ ಮಾಹಿತಿ ಆಧರಿಸಿ ಆತನ ಸ್ನೇಹಿತರನ್ನು ವಿಚಾರಿಸಿದ ಪೊಲೀಸರಿಗೆ ಆತ ಬೇಟೆಗೆ ತೆರಳಿರುವ ವಿಚಾರ ಯಾರಿಗೂ ಗೊತ್ತಿರಲಿಲ್ಲ ಎನ್ನುವುದು ತಿಳಿಯುತ್ತದೆ.
ಈ ಬಗ್ಗೆ ಅನುಮಾನಗೊಂಡ ಪೊಲೀಸರು ಶೋಧ ನಡೆಸಿದಾಗ ಪಕ್ಕದ ದೇಹಳ್ಳಿ ಗ್ರಾಮದಲ್ಲಿ ಕಾಣೆಯಾದ ರಾಜೇಶನ ಬೈಕ್ ಹಾಗೂ ಮೊಬೈಲ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಕಾಡುಪ್ರಾಣಿಗೆ ಬಲಿಯಾದಂತೆ ಬಿಂಬಿಸಲು ಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಆತನ ಪತ್ನಿಯನ್ನು ತೀವ್ರವಾಗಿ ತನಿಖೆಗೆ ಒಳಪಡಿಸಿದಾಗ ಮನೆಯವರು ಮಾಡಿದ ಹತ್ಯೆಯಲ್ಲಿ ಪತ್ನಿಯೂ ಶಾಮೀಲಾಗಿರುವ ವಿಚಾರ ಗೊತ್ತಾಗಿದೆ.
ರಾಜೇಶ ನಾಯ್ಕ ಚಿಕ್ಕಮಾವಳ್ಳಿ ಗ್ರಾಮದ ತನ್ನ ಪತ್ನಿಯ ಮನೆಯಲ್ಲಿಯೇ ಉಳಿದುಕೊಂಡಿದ್ದ. ಆಸ್ತಿ ವಿಚಾರವಾಗಿ ಹೆಂಡತಿಯ ಮನೆಯವರೊಂದಿಗೆ ಜಗಳವಾಡುತ್ತಿದ್ದು, ಹೆಂಡತಿ ಮೇಲೂ ಹಲ್ಲೆ ನಡೆಸುತ್ತಿದ್ದನಂತೆ.
ಇದೇ ವಿಚಾರವಾಗಿ ಜೂನ್ 10 ರಂದು ಸಹ ಆಸ್ತಿ ವಿಚಾರವಾಗಿ ತನ್ನ ಪತ್ನಿ, ಅತ್ತೆ, ಮಾವ ಹಾಗೂ ಬಾವನೊಂದಿಗೆ ಜಗಳ ತೆಗೆದಿದ್ದ. ಈ ವೇಳೆ ಸಿಟ್ಟಿಗೆದ್ದ ಮಾವ ಹಾಗೂ ಮನೆಯವರು ರಾಜೇಶನ ಮೇಲೆ ಗುದ್ದಲಿ ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಇದಾದ ಬಳಿಕ ಆತನ ಶವವನ್ನು ಕಾಡಿನಲ್ಲಿ ಸುಟ್ಟು ಹಾಕಿ ಬಳಿಕ ಬೂದಿ, ಮೂಳೆಗಳನ್ನು ಯಾರಿಗೂ ಸಿಗದಂತೆ ಕಾಡಿನಲ್ಲಿ ಎಸೆದು ಬಂದಿದ್ದರು. ಬಳಿಕ ಆತನ ಬೈಕ್, ಮೊಬೈಲ್ ಹಾಗೂ ಚಪ್ಪಲಿಯನ್ನು ದೇಹಳ್ಳಿ ಗ್ರಾಮದ ಕಾಡಿನಲ್ಲಿ ಎಸೆದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು.
ಈ ಸಂಬಂಧ ಐಪಿಸಿ ಸೆಕ್ಷನ್ 302, 201, 34 ಅಡಿಯಲ್ಲಿ ಮೃತನ ಪತ್ನಿ ಶ್ವೇತಾ ನಾಯ್ಕ, ಮಾವ ದೀಪಕ ಬುದ್ದಾ ಮರಾಠಿ, ಮೃತನ ಭಾವ ಗಂಗಾಧರ ದೀಪಕ ಮರಾಠಿ ಹಾಗೂ ಅತ್ತೆ ಯಮುನಾ ದೀಪಕ ಮರಾಠಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಜಗಳ ಮಾಡುತ್ತಿದ್ದ ಪತಿಯ ಹತ್ಯೆಗೆ ಹೆಂಡತಿಯೂ ತನ್ನ ಕುಟುಂಬಸ್ಥರಿಗೆ ಸಾಥ್ ನೀಡಿದ್ದಳು. ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ಕುಟುಂಬದವರು ಜೈಲು ಸೇರಿದ್ದಾರೆ.