ಕಾರವಾರ: ನವೆಂಬರ್ 20ರಂದು ಅಪಘಾತದಲ್ಲಿ ಮೃತಪಟ್ಟ ಪ್ರಜಾವಾಣಿಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್ ಅವರ ಮೃತದೇಹವನ್ನು ಸರಕು ಸಾಗಣೆ ವಾಹನದಲ್ಲಿ ಸಾಗಿಸಿ, ಅಮಾನವವೀಯತೆ ಮೆರೆದಿದ್ದನ್ನ ಖಂಡಿಸಿ ಮತ್ತು ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೋರಿ ಕಾರವಾರ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿಯ ಹಾವೇರಿ ವರದಿಗಾರ ಎಂ.ಸಿ.ಮಂಜುನಾಥ ಅವರು ದಾವಣಗೆರೆ ಜಿಲ್ಲೆಯ ಮಾಯಕೊಂಡ ಬಳಿ ಬುಧವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನೊಂದ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಆದರೆ, ಅವರ ಕುಟುಂಬ ಸಂಕಷ್ಟದಲ್ಲಿರುವ ಕಾರಣ,ಇದೊಂದು ವಿಶಿಷ್ಟ ಪ್ರಕರಣ ಎಂದು ಪರಿಗಣಿಸಿ,ನೆರವಿನ ಮೊತ್ತವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಮೃತ ಮಂಜುನಾಥ ಅವರ ಸಾವಿಗೆ ಕಾರಣನಾದ ಟ್ರ‍್ಯಾಕ್ಟರ್ ಚಾಲಕನನ್ನು ಶೀಘ್ರವೇ ಪತ್ತೆ ಹಚ್ಚಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಮೃತರ ಶವವನ್ನು ಸಾಗಿಸಲು ಸಕಾಲದಲ್ಲಿ ಆಂಬುಲೆನ್ಸ್ ನೆರವು ಸಿಗದೇ ಸರಕು ಸಾಗಣೆಯ ವಾಹನದಲ್ಲಿ ಕೊಂಡೊಯ್ದಿರುವುದು ವಿಷಾದಕರ. ಇನ್ನು ಮುಂದಾದರೂ ಯಾರದೇ ಶವವನ್ನು ಈ ರೀತಿ ಅಮಾನವೀಯ ರೀತಿಯಲ್ಲಿ ಸಾಗಿಸುವಂತಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಆದೇಶ ಮಾಡುವಂತೆ ವಿನಂತಿ ಮಾಡಲಾಗಿದೆ.