ಕಾರವಾರ (ಉತ್ತರ ಕನ್ನಡ): ಅರಣ್ಯ ಅತಿಕ್ರಮಣ ಮಾಡಿಕೊಂಡವರಿಗೆ ಹಕ್ಕು ಪತ್ರ ನೀಡುವುದು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಮತ್ತು ಹಸಿರು ಸೇನೆ ಸದಸ್ಯರು ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಸದಸ್ಯರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ರೈತರು ಬಗರ್ ಹುಕುಂ ಮತ್ತು ಅರಣ್ಯ ಅತಿಕ್ರಮಣ ಮಾಡಿಕೊಂಡು ಬಂದವರಾಗಿದ್ದು, ಅಂತಹ ರೈತರಿಗೆ ಕಂದಾಯ ಇಲಾಖೆಯಿಂದ ಕೂಡಲೇ ಹಕ್ಕುಪತ್ರ ನೀಡಬೇಕು. ಜತೆಗೆ ಸ್ವಂತ ಜಮೀನು ಇದ್ದು ಹತ್ತಾರು ಎಕರೆ ಜಮೀನು ಅತಿಕ್ರಮಣ ಮಾಡಿಕೊಂಡವರ ಜಮೀನನ್ನು ತನಿಖೆ ನಡೆಸಿ ಸರ್ಕಾರದ ವಶಕ್ಕೆ ಪಡೆದು ಜಮೀನು ರಹಿತ ಬಡ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಬೆಳೆಗೆ ಕೂಡಲೇ ಬೆಂಬಲು ಬೆಲೆ ಘೋಷಣೆ ಮಾಡಬೇಕು. ರಾಜ್ಯದಲ್ಲಿ ರಸ್ತೆ ಹಾಗೂ ಸೇತುವೆ ಕಳಪೆ ಕಾಮಗಾರಿಯಿಂದ ಹಾನಿಯಾಗಿದ್ದು, ಕೂಡಲೇ ಇಂತಹ ಕಾಮಗಾರಿಗಳ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದರು.
ಮದ್ಯ ಸೇವನೆಯಿಂದಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಕೂಡಲೇ ಸರ್ಕಾರ ಮದ್ಯ ನಿಷೇಧ ಕಾನೂನು ಜಾರಿಗೆ ತರುವಂತೆ ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.