ಕಾರವಾರ: ನಮ್ಮ ಗ್ರಾಮೀಣ ಹಬ್ಬಗಳು ವೈವಿಧ್ಯಮಯವಾಗಿರುತ್ತವೆ. ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುವ ಹಬ್ಬ-ಹರಿದಿನಗಳಂತೂ ಒಂದಕ್ಕಿಂತ ಒಂದು ವಿಶಿಷ್ಟ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಬೇಸಿಗೆಯ ಕೊನೆಯಲ್ಲಿ ಆಚರಿಸುವ ಬಂಡಿಹಬ್ಬ ಎನ್ನುವ ವಿಶೇಷ ಜಾತ್ರಾ ಮಹೋತ್ಸವ ಎಲ್ಲರ ಗಮನ ಸೆಳೆಯುತ್ತದೆ.
ಅಂಕೋಲಾದ ಅತಿದೊಡ್ಡ ಶಾಂತದುರ್ಗಾ ದೇವಿಯ ಬಂಡಿಹಬ್ಬ ವಿಜೃಂಭಣೆಯಿಂದ ಜರುಗಿತು. ಸಾಂಪ್ರದಾಯಿಕ ವೈಶಿಷ್ಟತೆಯಿಂದ ಕೂಡಿರುವ ಈ ಹಬ್ಬದಲ್ಲಿ ಊರ ಹೊರಗಿದ್ದವರು ಊರಿಗೆ ಬರುತ್ತಾರೆ. ಹಬ್ಬದ ದಿನ ಸಂಜೆ ಇಲ್ಲಿನ ಕುಂಬಾರಕೇರಿಯ ಗುನಗರು ಕಲಶ ಹೊತ್ತು ಊರೂರು ಪ್ರವೇಶಿಸುತ್ತಾರೆ. ಗಲ್ಲಿಗಲ್ಲಿಗಳಲ್ಲಿ ನಿಂತ ಭಕ್ತರು ಕಲಶಕ್ಕೆ ಪೂಜೆ ಸಲ್ಲಿಸುವರು.
ಬಂಡಿಹಬ್ಬದ ನಂತರವೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಇಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ. ಇದು ಸ್ವಾತಂತ್ರ್ಯ ಸಂಗ್ರಾಮ ಕಾಲದಿಂದಲೂ ಆಚರಿಸುತ್ತಾ ಬಂದಿರುವ ಹಬ್ಬ. ಸರ್ವ ಸಮಾಜದವರ ಆರಾಧನೆಯ ಉತ್ಸವವಾಗಿಯೂ ಬಂಡಿಹಬ್ಬ ಮಾರ್ಪಟ್ಟಿದೆ. ಅನಾದಿ ಕಾಲದಿಂದಲೂ ಇಲ್ಲಿನ ಗುನಗಾ ಸಮಾಜದ ಮುಖ್ಯಸ್ಥರು ಕಲಶ ಹೊರುತ್ತಾರೆ. ರಾತ್ರಿ ನಡೆಯುವ ಮೆರವಣಿಗೆಯ ನಂತರ ದೇವಿಯ ವಿಗ್ರಹವನ್ನು ಬಂಡಿಯಲ್ಲಿ ಕೂರಿಸಿ ತಿರುಗಿಸುತ್ತಾರೆ. ಈ ಮೂಲಕ ಶಾಂತದುರ್ಗಾ ದೇವಿಯ ಆರಾಧನೆ ಕೈಗೊಳ್ಳುತ್ತಾರೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ನದಿಯಂತಾದ ರಸ್ತೆಗಳು: ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್