ಶಿರಸಿ : ನಿಧಾನವಾಗಿ ಹರಿದಾಡ್ತಿರೋ ಉಡಗಳು.. ಈಗಷ್ಟೇ ಪೊರೆ ಕಳಚಿದ ಉರಗ.., ಗಿಳಿಗಳ ಕೂಗು, ಹಸಿರು ಹುಲ್ಲು ತಿನ್ನುತ್ತಿರುವ ಮೊಲ, ಮುಂಗಸಿ, ಕುದರೆ ಇನ್ನೂ ಹತ್ತು ಹಲವು ಪ್ರಾಣಿ, ಪಕ್ಷಿಗಳ ಜೀವ ವೈವಿಧ್ಯ ನೋಡಲು ಸಿಗುವುದು ಯಾವುದೋ ಝೂನಲ್ಲಿ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.
ಹೌದು, ಇದು ಪ್ರಾಣಿ ಪ್ರಿಯ ವೈದ್ಯರೊಬ್ಬರು ನಡೆಸುತ್ತಿರುವ ಪೆಟ್ ಅಮೇಜಿಂಗ್ ಪ್ಲಾನೆಟ್ ಕಥೆ. 'ಪೆಟ್ ಅಮೇಜಿಂಗ್ ಪ್ಲಾನೆಟ್ ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿ-ಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಎನಿಸೋದ್ರಲ್ಲಿ ಸಂಶಯವೇ ಇಲ್ಲ. ಬಹುತೇಕ ಪ್ರಾಣಿಗಳು ಹಾದಿಬೀದಿಲಿ ಗಾಯ ಮಾಡ್ಕೊಂಡಿದ್ದವು. ಇವನ್ನು ಚಿಕಿತ್ಸೆಗಾಗಿ ತಂದ ಮೇಲೆ ಈಗ ಅವೆಲ್ಲ ಈ ಪ್ಲಾನೆಟ್ ಸದಸ್ಯರಾಗಿ ಬಿಟ್ಟಿವೆ. 5 ವರ್ಷಗಳಿಂದ ಪಶುವೈದ್ಯ ರಾಜೇಂದ್ರ ಶಿರಸಿಕರ್ ಅವರ ಪ್ರಯತ್ನದ ಫಲವಾಗಿ ಈ ಪ್ಲಾನೆಟ್ ಹಲವು ಜೀವ ವೈವಿಧ್ಯತೆಗಳ ತಾಣವಾಗಿದೆ.
ಉತ್ತರಕನ್ನಡದ ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ಈ ಪೆಟ್ ಅಮೇಜಿಂಗ್ ಪ್ಲಾನೆಟ್ ತಲೆ ಎತ್ತಿದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಅನಾಥ ಪ್ರಾಣಿಗಳು, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ರಾಣಿಗಳಿಗೆ ಈ ಪ್ಲಾನೆಟ್ ಆಶ್ರಯ ಪಡೆದಿವೆ. ಯಾವುದೇ ಪ್ರಾಣಿ ಸಂಕಷ್ಟದಲ್ಲಿದೆ ಎನ್ನೋ ಸುದ್ದಿ ತಿಳಿದರೂ, ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಶಿರಸಿಕರ್ ಅವುಗಳಿಗೊಂದು ನೆಲೆ ಒದಗಿಸುವ ಕೆಲಸ ಮಾಡ್ತಾರೆ. ತಮ್ಮ ಜಾಗವನ್ಯನೇ ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ.
ಮೊದಲು ಹವ್ಯಾಸಕ್ಕೆ ಆರಂಭವಾದ ಕಾಯಕಕ್ಕೆ ಈಗ "ಪದ್ಮ ಸೇವಾ ಟ್ರಸ್ಟ್ ಅಡಿಯಲ್ಲಿ" ಪುನರ್ವಸತಿ ಕೇಂದ್ರದ ಸ್ವರೂಪ ನೀಡಿದ್ದಾರೆ. ಅಲ್ಲಿ ಕುದುರೆ, ಆಡು, ಗಿಳಿ, ಕೋಳಿ, ಮೊಲ ಸೇರಿದಂತೆ ಹಲವು ಜೀವಿಗಳು ಚಿಕಿತ್ಸೆ ಪಡೆಯುತ್ತಿವೆ. ಹಲವಾರು ಪ್ರಾಣಿ-ಪಕ್ಷಿಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿವೆ. ಹಲವು ಪ್ರಾಣಿ ಪಕ್ಷಿಗಳನ್ನು ಹೊರ ರಾಜ್ಯ, ವಿದೇಶಗಳಿಂದಲೂ ತಂದು ನೋಡುಗರ ವಿಶೇಷ ಸಂತಸಕ್ಕೆ ಕಾರಣರಾಗಿದ್ದಾರೆ ಈ ಪಶುವೈದ್ಯ.
ಈ ಪ್ಲಾನೆಟ್‌ದಲ್ಲಿ ಆಫ್ರಿಕದ ಹೆಬ್ಬಾವು, ವಿವಿಧ ಜಾತಿಯ ಹಾವು, ವಿವಿಧ ಗಿಳಿಗಳು, ಬಾತುಕೋಳಿ, ವಿದೇಶದ ಕೋಳಿಗಳು, ನವಿಲು, ಯುರೋಪಿನ ಮುಂಗುಸಿ, ಮೊಲ, ಉಡ, ಸೈಬೀರಿಯಾದ ಮುಂಗುಸಿ ಮೊದಲಾದ 50ಕ್ಕೂ ಹೆಚ್ಚು ಬಗೆಯ ಪ್ರಾಣಿ-ಪಕ್ಷಿಗಳಿವೆ. ಇಲ್ಲಿರುವ ಎಲ್ಲವೂ ಸಾಕುಪ್ರಾಣಿಗಳು. ಇವ್ಯಾವವೂ ಅರಣ್ಯ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ ಎನ್ನುತ್ತಾರೆ ರಾಜೇಂದ್ರ ಶಿರಸಿಕರ್.
ಒಂದು ದಶಕದಿಂದ ಅನಾಥ ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸೆ:
ಒಂದು ದಶಕದಿಂದ ಅನಾಥ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. 1600ಕ್ಕೂ ಹೆಚ್ಚು ಆಕಳು, ನಾಯಿ, ಕುದುರೆ, ಕಾಡುಬೆಕ್ಕು, ಪಾರಿವಾಳ, ಗೂಬೆ, ಕಾಗೆ ಎಲ್ಲವನ್ನೂ ಆರೈಕೆ ಮಾಡಿದ್ದೇನೆ. ನಿರ್ಧಿಷ್ಟ ಜಾಗವಿಲ್ಲದ ಕಾರಣ ಗಾಯಗೊಂಡ ಪ್ರಾಣಿಗಳಿಗೆ ರಸ್ತೆಯ ಮೇಲೆಯೇ ಚಿಕಿತ್ಸೆ ನೀಡುತ್ತಿದ್ದೆ. ಈ ಕೊರತೆ ನೀಗಿಸಲು, ಪ್ಲಾನೆಟ್ ಪ್ರಾರಂಭಿಸಿದೆ. ಚಿಕಿತ್ಸೆ ಪಡೆಯುವ ಪ್ರಾಣಿಗಳು ಗುಣಮುಖವಾದ ಮೇಲೆ ಪುನಾ ಅವುಗಳನ್ನು ನಿಸರ್ಗದ ಮಡಿಲಿಗೆ ಸೇರಿಸಲಾಗುತ್ತದೆ. ಪ್ರಾಣಿಗಳ ಸೇವೆ ನೆರವು ನೀಡುವವರು ಕಡಿಮೆ. ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟ. ಹೀಗಾಗಿ, ಉದ್ಯಾನದ ಪ್ರವೇಶಕ್ಕೆ 50 ರೂ. ದರ ನಿಗದಿಪಡಿಸಿದ್ದು, ಈ ಹಣವನ್ನು ಪ್ರಾಣಿಗಳ ಚಿಕಿತ್ಸೆಗೆ ಬಳಸುತ್ತಿದ್ದಾರೆ.
ಇಲ್ಲಿ ಮಕ್ಕಳು, ದೊಡ್ಡವರನ್ನು ಸೆಳೆಯುವ ಅನೇಕ ಪ್ರಾಣಿಗಳಿವೆ. ಇವುಗಳ ಜೀವನ ಕ್ರಮ, ಆಹಾರ, ಮೊಟ್ಟೆಯಿಡುವ, ಮರಿ ಮಾಡುವ ವಿಧಾನ, ಪಕ್ಷಿ ಸಂಕುಲ ರಕ್ಷಣೆ ಎಲ್ಲವನ್ನೂ ಇಲ್ಲಿಗೆ ಭೇಟಿ ನೀಡುವವರಿಗೆ ವಿವರಿಸಲಾಗುತ್ತದೆ. ಅತಿ ಸಮೀಪದಿಂದ ಪ್ರಾಣಿಗಳನ್ನು ನೋಡಿದ ಖುಷಿಯೂ ಅವರಿಗೆ ಸಿಗುತ್ತದೆ ಎಂದು ವೀಕ್ಷಣಗೆ ಬಂದವರು ಹೇಳ್ತಾರೆ.
ಒಟ್ಟಾರೆ ಪ್ರಾಣಿಪ್ರಿಯ ವೈದ್ಯರೊಬ್ಬರ ಹವ್ಯಾಸದಿಂದ ಆರಂಭವಾದ ಪ್ರಾಣಿ ಸಂರಕ್ಷಣಾ ಕಾಯಕ ಪೆಟ್ ಅಮೇಜಿಂಗ್ ಪ್ಲಾನೆಟ್ ಆಗಿ ಬದಲಾಗಿದೆ. ಪ್ರಾಣಿ ಪ್ರಿಯರ ಪಾಲಿನ ಝೂ ಆಗಿಯೂ ಮುದ ನೀಡುತ್ತಿದೆ. ಇದರ ರೂವಾರಿ ಶಿರಸಿಕರ್ ಪ್ರಯತ್ನ ಇತರರಿಗೂ ಮಾದರಿಯಾಗಿದೆ.