ಕಾರವಾರ: ಅಂಗನವಾಡಿ ಕೇಂದ್ರಗಳನ್ನು ಉಳಿಸುವುದು ಅಷ್ಟೇ ಅಲ್ಲ.. ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿಯಾಗಬೇಕು. ಎಲ್ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನೂ ಅಂಗನವಾಡಿಯಲ್ಲಿಯೇ ನೀಡಬೇಕು ಅಂತಾ ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತು ಉತ್ತರಕನ್ನಡದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಜಿಲ್ಲಾ ನೌಕರರು ಸಂಘದಿಂದ ಪ್ರತಿಭಟನಾ ಜಾಥಾ ನಡೆಸಲಾಯಿತು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಲಂಡನ್ ಸೇತುವೆ ಬಳಿ ಸೇರಿದ ಸುಮಾರು ನೂರಾರು ನೌಕರರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾತೃಪೂರ್ಣ ಯೋಜನೆ ಯಶಸ್ವಿಗೆ ಸಹಾಯಕಿಯರನ್ನು ನೀಡಬೇಕು. ಹೊಸ ಶಿಕ್ಷಣ ನೀತಿಯಂತೆ 3 ರಿಂದ 8 ವರ್ಷದ ವರ್ಗೀಕರಣ ನೀತಿಯನ್ನು ಕೈ ಬಿಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ₹21 ಸಾವಿರ ಸಂಬಳ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯ್ತು.