ಕಾರವಾರ: ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಸಂಸದ ಅನಂತ್ಕುಮಾರ್ ಹೆಗಡೆಯನ್ನು ಭೇಟಿ ಮಾಡಿದ ನಿರಾಶ್ರಿತ ಸಂಘಟನೆಯವರ ಬಳಿ, ಅನಂತ್ಕುಮಾರ್ ಋಣ ಕೇಳಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೀಬರ್ಡ್ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ವಿ ನಾಯ್ಕ, ಸೀಬರ್ಡ್ ನಿರಾಶ್ರಿತರಿಗೆ 28ಎ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿತ್ತು. ಆದರೆ ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದರೂ ಸಾಧ್ಯವಾಗದೆ ಅರ್ಜಿಗಳು ವಾಪಸಾಗುತ್ತಿದ್ದವು. ಈ ವೇಳೆ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್ ಹೆಗಡೆ ಬಳಿ ತೆರಳಿ ಸೀಬರ್ಟ್ ಪರಿಹಾರ ಬಾರದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ತಿಳಿಸಿದ್ದೆವು. ಅಲ್ಲದೆ ರಕ್ಷಣಾ ಇಲಾಖೆಗೆ ಈ ಬಗ್ಗೆ ತಿಳಿಸಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದೆವು. ಈ ವೇಳೆ ಸಚಿವರು ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ ಪರಿಹಾರ ಒದಗಿಸಿಕೊಡುತ್ತೇವೆ. ಇದಕ್ಕೆ ನಮಗೆ ಯಾವ ರೀತಿ ಋಣ ತೀರಿಸುತ್ತೀರಿ ಎಂದು ಕೇಳಿದ್ದರು ಎಂದರು.
ನಾವು ಪರಿಹಾರ ದೊರೆತಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ, ಅವರ ಪರವಾಗಿ ನಿರಾಶ್ರಿತರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿದ್ದೆವು. ಇದಕ್ಕೆ ಒಪ್ಪಿದ ಅವರು ಪರಿಹಾರ ಒದಗಿಸಿಕೊಟ್ಟಿದ್ದಾರೆ. ನಾವು ಕೂಡ ಕಳೆದ ಬಾರಿ ಬಿಜೆಪಿ ಪರ ಪ್ರಚಾರ ನಡೆಸಿದ್ದೇವೆ ಎಂದು ಅವರು ಹೇಳಿದರು.
ಇನ್ನು ಕೆಲ ಪ್ರಕರಣಗಳು ತಾಂತ್ರಿಕ ಕಾರಣದಿಂದ ಬಾಕಿ ಇದ್ದು, ಮೊನ್ನೆ ಕಾರವಾರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹರಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಅವರ ಬಳಿ ನಾವು ನಿರಾಶ್ರಿತ ಕುಟುಂಬಗಳು, ಮನೆಗೊಂದು ನೌಕರಿ ಹಾಗೂ ವೃದ್ಧರಿಗೆ ಪಿಂಚಣಿ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದೇವೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು.