ಶಿರಸಿ : ಲೋಕಸಭಾ ಚುನಾವಣೆಗೆ ಮತದಾನ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಟೆಂಪಲ್ ರನ್ ಮಾಡುತ್ತಿದ್ದಾರೆ.
ಸೋಮವಾರ ಪ್ರಚಾರ ಸಭೆಗೆ ತೆರಳುವ ಮುನ್ನ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದಂತೆ ದೇವಾಲಯಗಳ ಭೇಟಿಯೂ ಹೆಚ್ಚಾಗಿದೆ. ಭಾನುವಾರ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ಅಸ್ನೋಟಿಕರ್ , ಸೋಮವಾರ ಮಧುಕೇಶ್ವರ ದೇವಾಲಯದಕ್ಕೆ ಭೇಟಿ ನೀಡಿದ್ದಾರೆ. ಅಸ್ನೋಟಿಕರ್ಗೆ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಸಾಥ್ ನೀಡಿದ್ದರು. ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಸಿಗಲೆಂದು ಬೇಡಿಕೊಂಡರು ಎನ್ನಲಾಗಿದೆ.
ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬನವಾಸಿ, ದಾಸನಕೊಪ್ಪ, ಯಲ್ಲಾಪುರ ಸೇರಿ ವಿವಿಧೆಡೆ ಪ್ರಚಾರ ನಡೆಸಿದರು. ಈ ವೇಳೆ ಸಹ ಶಾಸಕ ಹೆಬ್ಬಾರ್, ಅಸ್ನೋಟಿಕರ್ಗೆ ಸಾಥ್ ನೀಡಿದರು.