ಕಾರವಾರ: ನದಿಯ ಹಿನ್ನೀರಿಲ್ಲಿ ಕೊಚ್ಚಿ ಹೋಗಿ ಮೂರು ದಿನದಿಂದ ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವೃದ್ಧನೋರ್ವ ಕೊನೆಗೂ ಸಾವನ್ನೇ ಗೆದ್ದು ಬಂದಿರುವ ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ.
ವೆಂಕಟರಾಯ್ ಕೋಠಾರಕರ್ ಮೇ. 16ರ ಸಂಜೆ ಕೋಣವನ್ನು ಹುಡುಕಿಕೊಂಡು ಬರುವುದಾಗಿ ತೌಕ್ತೆ ಚಂಡಮಾರುತ ಅಬ್ಬರಿಸುತ್ತಿದ್ದ ವೇಳೆ ತೆರಳಿದ್ದರು. ಆದರೆ ತಂದೆ ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಊರಿನವರಿಗೂ ವಿಷಯ ತಿಳಿಸಿದ್ದು, ಎಲ್ಲರೂ ಗಾಬರಿಗೊಂಡು ಎರಡು ದಿನ ಹುಡುಕಿದ್ದಾರೆ. ಆದರೆ ಎಲ್ಲಿಯೂ ಸಿಗದೆ ಇದ್ದಾಗ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದ್ದು, ಕೊನೆಗೆ ಕಾಳಿ ನದಿ ತೀರದುದ್ದಕ್ಕೂ ಹುಡುಕುತ್ತಿದ್ದಾಗ ನದಿಯ ಹಿನ್ನೀರಿನಲ್ಲಿ ಮುಳುಗಿ ಸಣ್ಣದೊಂದು ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವುದು ಗೊತ್ತಾಗಿದೆ.
ತಕ್ಷಣ ಊರಿನ ಕೆಲವರು ನದಿಗೆ ಇಳಿದು ಆತನನ್ನು ರಕ್ಷಣೆ ಮಾಡಿ ಮನೆಗೆ ಕರೆತಂದು ಆರೈಕೆ ಮಾಡಲಾಗಿದೆ. ಮೂರು ದಿನ ನೀರಿನಲ್ಲಿದ್ದ ಕಾರಣ ಅಸ್ವಸ್ಥರಾದ ಸ್ಥಿತಿಯಲ್ಲಿದ್ದಾರೆ ಎನ್ನುತ್ತಾರೆ ಊರಿನವರು.
ಇದನ್ನೂ ಓದಿ: ಇಂದು ಸಿಎಂ ಸುದ್ದಿಗೋಷ್ಠಿ: ವಿಶೇಷ ಪ್ಯಾಕೇಜ್, ಲಾಕ್‌ಡೌನ್ ವಿಸ್ತರಣೆ ಘೋಷಣೆ ಸಾಧ್ಯತೆ