ಕಾರವಾರ: ತರಳಬಾಳು ಜಗದ್ಗುರು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಪಂಡಿತಾರಾಧ್ಯ ಶ್ರೀಶಿವಾಚಾರ್ಯ ಸ್ವಾಮಿಗಳು ದೀಪ ಬೆಳಗುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಸಮಾನತೆ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇತ್ತು. ಆದರೆ, ಐದು ಬೆರಳು ಒಂದಕ್ಕೊಂದು ಸಮವಿಲ್ಲದಿದ್ದರೂ, ಹೇಗೆ ಒಂದಾಗಿ ಕೆಲಸ ಮಾಡುತ್ತವೆಯೋ ಹಾಗೆ ನಮ್ಮ ನಡುವೆ ಏನೇ ಅಸಮಾನತೆಗಳಿದ್ದರೂ ಸಮಾಜಕಟ್ಟುವ ಕಾರ್ಯದಲ್ಲಿ ಒಂದಾಗಬೇಕು ಎಂದು ಹೇಳಿದರು.
ಜಾತಿ, ಮತ, ಲಿಂಗ ಮುಂತಾದ ಅಸಮಾನತೆಯ ನಿವಾರಣೆಯ ಬಗ್ಗೆ ಅರಿವು ಮೂಡಿಸುವುದೇ ಮತ್ತೆ ಕಲ್ಯಾಣದ ಮುಖ್ಯ ಉದ್ದೇಶ. ಸಮಾಜವನ್ನು ತಿದ್ದುವುದಕ್ಕಿಂತ, ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ, ಜಗತ್ತು ಸರಿಹೋಗುವುದು ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಶಿವಾಚಾರ್ಯ ಸ್ವಾಮಿಗಳು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು. ಈ ವೇಳೆ ಮಾಜಿ ಸಚಿವ ಬಸವರಾಜ ಹೊರಟ್ಟಿ, ಉಪನ್ಯಾಸಕಿ ಡಾ. ಹೇಮಾ ಪಟ್ಟಣ ಶೆಟ್ಟಿ ಉಪಸ್ಥಿತರಿದ್ದರು.