ಭಟ್ಕಳ(ಉತ್ತರ ಕನ್ನಡ): ಕುಟುಂಬದಲ್ಲೇ ಹುಟ್ಟಿಕೊಂಡ ಆಸ್ತಿ ಜಗಳ ಮನೆ ಮಂದಿಯನ್ನೆಲ್ಲಾ ಬಲಿ ಪಡೆದಿತ್ತು. ಇತ್ತೀಚೆಗೆ ಭಟ್ಕಳ ತಾಲೂಕಿನ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಇಡೀ ತಾಲೂಕು ಮತ್ತು ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಇಂದು ಕೇಸ್ನ ಮುಖ್ಯ ಆರೋಪಿಯನ್ನು ಭಟ್ಕಳ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ. ಫೆಬ್ರವರಿ 24ರಂದು ಆಸ್ತಿ ವಿಚಾರಕ್ಕಾಗಿ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ವಿದ್ಯಾ ಭಟ್ ಹಾಗೂ ಶ್ರೀಧರ್ ಭಟ್ರನ್ನು ಶನಿವಾರ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಪ್ರಕರಣದ ಮುಖ್ಯ ಆರೋಪಿ ವಿನಯ್ ಭಟ್ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಭಟ್ಕಳ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿ ವಿನಯ್ ಭಟ್ನನ್ನು ಭಾನುವಾರ ಶಿವಮೊಗ್ಗದಲ್ಲಿ ಬಂಧಿಸಿ ಭಟ್ಕಳಕ್ಕೆ ಕರೆತಂದಿದ್ದಾರೆ.
ಇದನ್ನೂ ಓದಿ : ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ಸೇರಿ ಒಂದೇ ಕುಟುಂಬದ ನಾಲ್ವರು ಬಲಿ!
ಪ್ರಕರಣದ ಹಿನ್ನೆಲೆ: ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಈ ಘಟನೆ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ಶುಕ್ರವಾರ ನಡೆದಿತ್ತು. ಘಟನೆಯಲ್ಲಿ ಶಂಭು ಭಟ್ (65), ಅವರ ಪತ್ನಿ ಮಾದೇವಿ ಹೆಗೆಡೆ (45), ಅವರ ಮಗ ರಾಜೀವ್ ಹೆಗಡೆ (34) ಹಾಗೂ ಸೊಸೆ ಕುಸುಮಾ ಭಟ್ (30) ಮೃತಪಟ್ಟಿದ್ದರು. ಅದೃಷ್ಟವಶಾತ್ ಮನೆಯೊಳಗೆ ಮಲಗಿದ್ದ ಮಗು ಹಾಗೂ ಪಕ್ಕದ ಮನೆಯಲ್ಲಿದ್ದ ಇನ್ನೊಂದು ಮಗು ಕೊಲೆಗಡುಕನಿಂದ ಪಾರಾಗಿದ್ದರು.
ಕುಟುಂಬದ ಸಂಬಂಧಿಯಿಂದಲೇ ಕೊಲೆ : ಕಳೆದ ಸಪ್ಟೆಂಬರ್ ತಿಂಗಳಲ್ಲಿ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶ್ರೀಧರ್ ಭಟ್ ಸಾವಿನ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದವರು ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿದ್ದರು. ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರ ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಆದರೆ ಶುಕ್ರವಾರ ಶಂಭು ಭಟ್ ಮನೆಯ ಪಕ್ಕದಲ್ಲಿ ಅಂದರೆ ವಿದ್ಯಾ ಭಟ್ ಅವರ ಪಾಲಿಗೆ ಬರುವ ಜಾಗದಲ್ಲಿದ್ದ ಕೊಟ್ಟಿಗೆಯನ್ನು ತೆಗೆದು ಅದರ ಕಲ್ಲುಗಳನ್ನು ಬೇರೆ ಕಡೆಗೆ ಒಯ್ಯಲಾಗಿತ್ತು. ಈ ವಿಚಾರವಾಗಿ ಜಗಳ ನಡೆದು ವಿದ್ಯಾ ಸಹೋದರ ಹಲ್ಯಾಣಿ ನಿವಾಸಿ ವಿನಯ್ ಭಟ್ ನಾಲ್ವರನ್ನು ಹತ್ಯೆ ಮಾಡಿದ್ದಾನೆ ಎಂಬುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಶಂಭು ಭಟ್ ಮಗಳಾದ ಜಯಶ್ರೀ ಪ್ರಕಾಶ ಅಡಿಗ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಹಳಿಯಾಳ: ಪತ್ನಿ ಕೊಂದು ಬ್ಯಾರೆಲ್ನಲ್ಲಿ ಶವ ಮುಚ್ಚಿಟ್ಟಿದ್ದ ಪತಿ ಅರೆಸ್ಟ್