ಕಾರವಾರ: ದಾಖಲೆಯಿಲ್ಲದೆ ಹವಾಲ ಹಣವನ್ನು ಸಾಗಾಟ ಮಾಡುವ ದಂಧೆ ಕರಾವಳಿ ಭಾಗದಲ್ಲಿ ಹಿಂದಿನಿಂದಲೂ ನಡೆಯುತ್ತಲೇ ಇದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೃಹತ್ ಮೊತ್ತದ ಹವಾಲ ಹಣ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸುಮಾರು ಎರಡು ಕೋಟಿ ಹಣವನ್ನು ಸಾಗಿಸುತ್ತಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
12133 ನಂಬರಿನ ಸಿಎಸ್ಎಂಟಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ರೈಲ್ವೆ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. 22 ವರ್ಷದ ರಾಜಸ್ಥಾನ ಮೂಲದ ಚೇನಸಿಂಗ್ ಹೇಮಸಿಂಗ್ ಬಂಧಿತ. ಈತ ರೈಲ್ವೆ ಟಿಕೆಟ್ ತೆಗೆಯದೇ ಮಂಗಳೂರಿಗೆ ಪ್ರಯಾಣಿಸುತ್ತಿದ್ದ. ಮಡಗಾಂವ ಬಳಿ ರೈಲ್ವೆ ಟಿಕೇಟ್ ಹೊಂದಿರದ ಈತನಿಗೆ ಕರ್ತವ್ಯದಲ್ಲಿದ್ದ ಟಿಸಿ, ಟಿಕೇಟ್ ಪಡೆಯದೆ ಇರೋದ್ರಿಂದ ದಂಡ ವಿಧಿಸಿದ್ರು. ಸಂಶಯ ಬಂದು ಈತನ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಹಣ ಇರೋದು ಗೊತ್ತಾಗಿದೆ.
ತಕ್ಷಣ ಕೊಂಕಣ ರೈಲ್ವೆ ವಿಚಕ್ಷಕ ದಳ ಅಧಿಕಾರಿಗೆ ಮಾಹಿತಿ ನೀಡಿದ್ದರಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಈತನಲ್ಲಿನ ಹಣ ಪರಿಶೀಲಿಸಿದಾಗ ಬರೋಬ್ಬರಿ 2 ಕೋಟಿ ರೂಪಾಯಿ ಹಣ ಸಿಕ್ಕಿದೆ. ರೈಲ್ವೆ ಪೊಲೀಸರು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಯುವಕನ ಸಹಿತ ಹಣವನ್ನು ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿತನ ತನಿಖೆ ನಡೆಸಿದ್ದಾರೆ.
ಬಂಧಿತನ ಬಳಿ ಸಿಕ್ಕ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಮುಂಬೈನಿಂದ ಓರ್ವ ಕೊಟ್ಟು ಇದನ್ನು ಮಂಗಳೂರಿಗೆ ತಲುಪಿಸಿ ಬಾ ಎಂದು ನೀಡಿದ್ದಾನೆ. ಹೀಗಾಗಿ, ತೆಗೆದುಕೊಂಡು ಹೋಗ್ತಿದ್ದೇನೆಂಬ ಉತ್ತರ ನೀಡಿದ್ದಾನೆ. ಸದ್ಯ ಆರೋಪಿಯನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹಣ ಜ್ಯುವೆಲ್ಲರಿಗೆ ಸಂಬಂಧಿಸಿದ ಹಣವಾಗಿದೆ. ಆದ್ರೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ಈತ ಹೇಳಿದ್ದಾನೆ. ಆದರೆ ಮುಂಬೈನಲ್ಲಿ ಯಾರು ಹಣ ನೀಡಿದ್ದಾರೆಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಅಕ್ರಮ ಚಟುವಟಿಕೆ ಮಟ್ಟಕ್ಕೆ ಆಗ್ರಹ: ಹೀಗಾಗಿ, ಇದು ಹವಾಲ ಹಣವಾಗಿರುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಆದಾಯ ತೆರಿಗೆ ಪಾವತಿಸದೆ ಹಣವನ್ನು ಈ ರೀತಿಯಾಗಿ ಸಾಗಾಟ ಮಾಡೋದು ಅಪರಾಧ. ಈ ಸಂಬಂಧ ಮಂಗಳೂರಿನಿಂದ ಆದಾಯ ತೆರಿಗೆ ಅಧಿಕಾರಿಗಳು ಕಾರವಾರಕ್ಕೆ ಆಗಮಿಸಿ ಬಂಧಿತ ವಿಚಾರಣೆ ನಡೆಸಿದ್ದಾರೆ. ಕರಾವಳಿಯಲ್ಲಿ ಮಾಫಿಯಾಗಳು ಈ ರೀತಿ ಕಾನೂನು ಬಾಹಿರವಾಗಿ ಹಣವನ್ನ ಸಾಗಿಸೋದು, ಮಾದಕ ದ್ರವ್ಯಗಳ ಸಾಗಾಟ ಮಾಡೋದು ಕದ್ದು ಮುಚ್ಚಿ ನಡೆಯುತ್ತಿದೆ. ಹೀಗಾಗಿ ಸಂಬಂಧಪಟ್ಟ ಪೊಲೀಸರು ಬಿಗಿ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗಳನ್ನ ಮಟ್ಟ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜೆಡಿಎಸ್ನಿಂದ ಜನತಾ ಸೇವಕ ಕಾರ್ಯಕ್ರಮ: ಹೆಚ್ಡಿಕೆ