ಶಿರಸಿ(ಉತ್ತರ ಕನ್ನಡ): ಗ್ಯಾಸ್ ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ತಂದೆ-ಮಗಳು ಮೃತಪಟ್ಟ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋದ ಕಿಂದಳಕರ್ (56) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (12) ಅಪಘಾತದಲ್ಲಿ ಮೃತರಾದವರು. ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯ ತಿರುವೊಂದರಲ್ಲಿ ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಟ್ಯಾಂಕರ್ ಗುದ್ದಿದ ರಭಸಕ್ಕೆ ಬಾಲಕಿಯ ದೇಹ ಛಿದ್ರಗೊಂಡಿದೆ.
ಮಗಳನ್ನು ಯಲ್ಲಾಪುರದಿಂದ ತಮ್ಮ ಸ್ವಂತ ಊರಾದ ಅಂಕೋಲಾ ತಾಲೂಕಿನ ಹಾರವಾಡಾಕ್ಕೆ ಬಿಡಲು ತಂದೆ ಹೊರಟಿದ್ದರು ಎನ್ನಲಾಗಿದೆ. ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.