ಕಾರವಾರ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಕುಮಟಾ ಪಟ್ಟಣದ ಪಾಂಡುರಂಗ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಕೇರಳ ರಾಜ್ಯದ ಎರ್ನಾಕುಲಂನ ನಿವಾಸಿಗಳಾದ ಫೆಮಿ ರಾಜೇಶ (35) ಮೃತಪಟ್ಟ ಮಹಿಳೆಯಾಗಿದ್ದಾಳೆ. ಇನ್ನು, ರಾಜೇಶ (38), ಸಬು ಜೊಸೇಫ್ (47), ರ್ಯಾಸ್ಲಿ ಸ್ಟ್ಯಾನ್ಲಿ (47), ಎಂಡ್ರೋಸ್ (15), ರೈವ್ (8), ಎಲಿನಾ (8) ರಿಸ್ (4) ಎಬೆನ ಟಿ ಎಸ್ (13) ಎಂಬುವರು ಗಾಯಗೊಂಡಿದ್ದಾರೆ.
ಗೋವಾದಿಂದ ಕೇರಳದ ಎರ್ನಾಕುಲಂಗೆ ಇನೋವಾ ಕಾರಿನ ಮೂಲಕ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಇನೋವಾ ಕಾರು ಸಂಪೂರ್ಣ ಜಖಂಗೊಂಡಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.