ಕಾರವಾರ: ನಾಗರಿಕ ವಿಮಾನ ನಿಲ್ದಾಣ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಚುರುಕುಕೊಂಡಿದ್ದು, ಅಂಕೋಲಾದಲ್ಲಿ ಗ್ರಾಮ ಸಭೆ ಮೂಲಕ ಭೂಮಿ ಕಳೆದುಕೊಳ್ಳಲಿರುವ ಕುಟುಂಬಗಳ ಅಹವಾಲನ್ನು ನಿನ್ನೆ ಸ್ವೀಕರಿಸಲಾಯಿತು.
ಅಂಕೋಲಾ ತಾಲೂಕಿನ ಬೆಲೆಕೇರಿ ಗ್ರಾಮ ಪಂಚಾಯತ್ ಸಭಾಭವನದ ಬಳಿ ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಭೂ ಸ್ವಾಧೀನಗೊಳ್ಳಲಿರುವ ಕುಟುಂಬಗಳನ್ನು ಗುರುತಿಸಿ ಪ್ರತ್ಯೇಕವಾಗಿ ಕರೆದು ಅಹವಾಲು ಆಲಿಸಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನಡೆದ ಅಹವಾಲು ಸಭೆ ನಡೆದಿದ್ದು, ಕೆಲವರು ಕೆಲ ಬೇಡಿಕೆಗಳನ್ನು ಮುಂದಿಟ್ಟು ಒಪ್ಪಿಗೆ ಸೂಚಿಸಿದರೇ, ಇನ್ನು ಕೆಲವರು ಭೂಸ್ವಾದೀನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲಗೇರಿ, ಬೆಲೆಕೇರಿ ಸೇರಿದಂತೆ ವಿಮಾನ ನಿಲ್ದಾಣಕ್ಕೆ ಗುರುತಿಸಿದ ಪ್ರದೇಶದ ಜನರು ಈಗಾಗಲೇ ನಿರಾಶ್ರಿತರಾಗಿದ್ದಾರೆ. ನೌಕಾನೆಲೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಭೂಮಿ ಕಳೆದುಕೊಂಡು ಇದೀಗ ಈ ಪ್ರದೇಶದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಹಿಂದಿನ ಭೂಸ್ವಾಧೀನಗೊಂಡ ಭೂಮಿಯ ಪರಿಹಾರ ನೀಡದೇ ಇದೀಗ ಮತ್ತೆ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮೊದಲು ಹಳೆಯ ಪರಿಹಾರ ನೀಡಿ ಬಳಿಕ ನಮ್ಮ ಬೇಡಿಕೆ ಈಡೇರಿಸಲು ಸಿದ್ಧರಿದ್ದಲ್ಲಿ ಮಾತ್ರ ಭೂಮಿ ನೀಡುವುದಾಗಿ ಸ್ಥಳೀಯರಾದ ಕೆ.ಆರ್. ನಾಯ್ಕ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಭೂ ಸ್ವಾಧೀನಗೊಳ್ಳಲಿರುವ ಕುಟುಂಬಗಳಿಂದ ಎರಡು ದಿನ ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುತ್ತಿದೆ. ಕೆಲವರಿಗೆ ಈ ಹಿಂದೆ ಸೀಬರ್ಡ್ ಯೋಜನೆಯ ಪರಿಹಾರ ದೊರೆಯದ ಬಗ್ಗೆ ಗಮನಕ್ಕೆ ತಂದಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಅಲ್ಲದೆ ಭೂಮಿ ಕಳೆದುಕೊಳ್ಳುವವರಿಗೆ ನೀಡುವ ಪರಿಹಾರದ ಮನವರಿಕೆ ಮಾಡಲಾಗಿದೆ. ಒಂದು ಬಾರಿ ಕಳೆದುಕೊಂಡವರಿಗೆ ನೀಡುವ ಪರಿಹಾರದಂತೆ ಎರಡನೇ ಬಾರಿ ಭೂಮಿ ಕಳೆದುಕೊಳ್ಳುವವರಿಗೆ ಒಟ್ಟು ಎರಡು ಹೆಚ್ಚಿನ ಪರಿಹಾರ ನೀಡಲಾಗುತ್ತದೆ. ಭೂಮಿ ಈಗ ಗುರುತು ಮಾಡಿದಂತೆ ಸ್ವಾಧೀನಗೊಳ್ಳಲಿದ್ದು, ಒಂದು ಅಥವಾ ಅರ್ಧ ಎಕರೆಯಷ್ಟು ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಜನರು ಸಲ್ಲಿಸಿದ ಅಹವಾಲನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಇನ್ನು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿರುವುದು ಇಲ್ಲಿನ ಅಲಗೇರಿ, ಬೆಲೆಕೇರಿ, ಬಾವಿಕೇರಿ ಭಾಗದ ಸಾಕಷ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೆಲವರು ಸೂಕ್ತ ಪರಿಹಾರ ನೀಡಿ, ಉದ್ಯೋಗ ಕಲ್ಪಿಸಿದಲ್ಲಿ ಭೂಮಿ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ರೆ ಇನ್ನು ಕೆಲವರು ನಿರಾಶ್ರಿತರಾದ ನಾವು ಯಾವುದೇ ಕಾರಣಕ್ಕೂ ಭೂ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.