ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಭಟ್ಕಳ ಭಾಗದ ಮೀನುಗಾರರ ಬಲೆಗೆ ರಾಶಿ ರಶಿ ಮೀನುಗಳು ಬಿದ್ದಿದ್ದು, ಮೀನುಗಾರರ ಮುಖದಲ್ಲಿ ಮಂದಹಾಸ ಉಂಟು ಮಾಡಿದೆ.
ಪ್ರವಾಹದಿಂದಾಗಿ ಮೀನುಗಾರಿಕೆಗೆ ತೆರಳಲಾಗದೆ ದಡದಲ್ಲಿಯೇ ಬೋಟ್ಗಳನ್ನು ಲಂಗರು ಹಾಕಲಾಗಿತ್ತು. ಮಳೆಯ ಪ್ರಮಾಣ ತಗ್ಗಿದ ಬಳಿಕ ಕಳೆದೆರಡು ದಿನಗಳಿಂದ ಭಟ್ಕಳ, ಮುರುಡೇಶ್ವರ, ಕುಮಟ ಭಾಗದಲ್ಲಿ ಮೀನುಗಾರರು ಬಲೆ ಬೀಸಿದ್ದರು. ಇಂದು ಸಹ ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರರು ಏಳೆದು ತಂದ ರಂಪಣಿ ಬಲೆಗೆ ಎರಡು ಕ್ವಿಂಟಾಲ್ಗೂ ಅಧಿಕ ಮೀನು ದೊರೆತಿವೆ.
ಅದೇ ರೀತಿ ಕುಮಟಾದ ವನ್ನಳ್ಳಿ ಬೀಚ್ನಲ್ಲಿ ಮೀನಿನ ಗುಡ್ಡೆಯನ್ನೇ ರಾಶಿ ಹಾಕಲಾಗಿದೆ. ಇದರಲ್ಲಿ ಎಲ್ಲ ಜಾತಿಯ ಮೀನುಗಳಿವೆ. ಇನ್ನು ಅಧಿಕ ಪ್ರಮಾಣದಲ್ಲಿ ಮೀನು ಬಿದ್ದಿರುವ ಸುದ್ದಿ ಹಬ್ಬುತ್ತಿದ್ದಂತೆ ಸುತ್ತಮುತ್ತಲಿನ ಜನರು ಮೀನುಗಳನ್ನು ಕೊಳ್ಳಲು ಮುಗಿಬಿದ್ದರು.