ಕಾರವಾರ: ಮನೆಯ ಅಂಗಳದಲ್ಲಿರುವ ಚಾಲಿ ಅಡಕೆಯನ್ನು ಹೊತ್ತೊಯ್ದ ಕಳ್ಳನನ್ನು, ಸಿಸಿಟಿವಿ ಕ್ಯಾಮರಾ ಆಧರಿಸಿ ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಗಜನಿಕೇರಿಯ ಸುರೇಶ ಶೆಟ್ಟಿ ಎನ್ನುವವರ ಮನೆಯ ಅಂಗಳದಲ್ಲಿ ಇಡಲಾದ ಚಾಲಿ ಅಡಕೆಯನ್ನು ಗುರುವಾರ ರಾತ್ರಿ 9 ಗಂಟೆಗೆ ಕಳ್ಳತನ ಮಾಡಲಾಗಿದೆ.
ಮನೆಯ ಗೇಟ್ ತೆಗೆದು ಸುತ್ತಮುತ್ತಲೂ ಯಾರು ಇಲ್ಲದೇ ಇರುವುದನ್ನು ಗಮನಿಸಿ ಒಳ ಬಂದ ಕಳ್ಳ ಅಡಕೆ ಮೂಟೆಯನ್ನು ತೆಗೆದುಕೊಂಡು ರಸ್ತೆಯಲ್ಲಿ ನಿಂತಿದ್ದ ಆಟೋ ಒಳಗೆ ಹಾಕಿದ್ದಾನೆ. ಈ ಎಲ್ಲಾ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.
ಆದರೆ ಮನೆಯ ಗೇಟ್ ತೆರೆದಿದ್ದು, ಅಡಕೆ ಮೂಟೆ ಕಾಣದೇ ಇರುವುದನ್ನು ಗಮನಿಸಿ, ಸಿಸಿ ಕ್ಯಾಮರ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿ ಹುಡುಕಾಟದಲ್ಲಿ ತೊಡಗಿದ್ದಾಗ ಗ್ರಾಮದ ಅಣತಿ ದೂರದಲ್ಲಿ ಅಡಕೆ ಮೂಟೆಯೊಂದಿಗೆ ಆರೋಪಿ ಮುಗ್ವಾ ಬಂಕನಹಿತ್ತಲ್ ನಿವಾಸಿ ನಾರಾಯಣ ಗಣೇಶ ನಾಯ್ಕ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ
ಆರೋಪಿಯನ್ನು ಅಡಕೆ ಮೂಟೆಯೊಂದಿಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು, ಇವರಿಗೆ ಸಹಕಾರ ನೀಡಿದ ಆಟೋ ಚಾಲಕ ಸೇರಿದಂತೆ ಸಹಾಯ ಮಾಡಿದವರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.