ಕಾರವಾರ(ಉತ್ತರಕನ್ನಡ): ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಉತ್ತರ ಕನ್ನಡ ಜಿಲ್ಲೆ ಕೊನೆಗೂ ಕೋವಿಡ್-19 ಸೋಂಕಿನಿಂದ ಮುಕ್ತಗೊಂಡಿದೆ.
ಕಾರವಾರ ತಾಲೂಕಿನ ಅರಗಾದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ 36 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ವರದಿ ಕೂಡ ನೆಗೆಟಿವ್ ಬಂದಿದೆ.
ಇದರಿಂದ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಾರ್ಚ್ 12ರಂದು ದುಬೈನಿಂದ ಭಟ್ಕಳಕ್ಕೆ ಆಗಮಿಸಿದ್ದ ಈತನಿಂದ ಗರ್ಭಿಣಿ ಪತ್ನಿಗೆ ಸೋಂಕು ತಗುಲಿತ್ತು. ತಿಂಗಳ ಬಳಿಕ ಈತನಲ್ಲಿಯೂ ಸೋಂಕು ಇರುವುದು ದೃಢಪಟ್ಟಿತ್ತು.
ಉಡುಪಿಯಲ್ಲಿ ಗರ್ಭಿಣಿ ಮಹಿಳೆ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು. ಇದೀಗ ಕಾರವಾರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ಕೂಡ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ 11 ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿದ್ದು, ಜಿಲ್ಲೆ ಕೊನೆಗೂ ಕೊರೊನಾ ಸೋಂಕಿತರಿಂದ ಮುಕ್ತಗೊಂಡಿದೆ. ಆದರೆ ಇದೀಗ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳದಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗುತ್ತಿದೆ.