ಭಟ್ಕಳ: ಮನೆಯಲ್ಲಿ ಮಲಗಿದ್ದ ಒಂದೂವರೆ ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ಮದೀನಾ ಕಾಲೋನಿಲ್ಲಿರುವ ಜಾಮಿಯಾಬಾದ್ ರಸ್ತೆಯ ಬಾಫಕ್ಕಿ ವಿಲ್ಲಾದ ಹುಜೈಫಾ ಸೈಯ್ಯದ್ ಮುಹಮ್ಮದ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ತಾಯಿಯ ಜೊತೆ ಮಲಗಿಸಿದ್ದ ಒಂದೂವರೆ ವರ್ಷದ ಫೈಝಾ ಎಂಬ ಮಗುವನ್ನು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಅಪಹರಣ ಮಾಡಲು ಮುಂದಾಗಿದ್ದಾನೆ. ಈ ವೇಳೆ ಈತನನ್ನು ನೋಡಿದ ಮಗುವಿನ ತಾಯಿ ಬೊಬ್ಬೆ ಹಾಕಿದ್ದಾಳೆ. ಇದರಿಂದ ಹೆದರಿದ ವ್ಯಕ್ತಿ ಮಗುವನ್ನು ಮನೆಯ ಕಾಂಪೌಂಡ್ ಗೋಡೆಯ ಬಳಿ ಬಿಟ್ಟು ಪರಾರಿಯಾಗಿದ್ದಾನೆ.
ಈ ಸಂಬಂಧ ಮಗುವಿನ ಕಡೆಯವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ವ್ಯಕ್ತಿಯನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರಗಿಸಬೇಕೆಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ. ಭಟ್ಕಳದಲ್ಲಿ ಕಳೆದ ಒಂದು ತಿಂಗಳಿಂದ ಮಕ್ಕಳ ಅಪಹರಣ ಮಾಡುವ ವದಂತಿಗಳು ಹರಿದಾಡುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರು ಆತಂಕಗೊಂಡಿದ್ದಾರೆ.