ಕಾರವಾರ: ನಕಲಿ ವ್ಯದ್ಯನೋರ್ವನ ಎಡವಟ್ಟಿನಿಂದ ವ್ಯಕ್ತಿಯೋರ್ವ ತನ್ನ ಕಾಲನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಈ ವ್ಯಕ್ತಿಯ ಇಡೀ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಅಂಕೋಲಾ ತಾಲೂಕಿನ ಹಡವ ಗ್ರಾಮದ ನಿವಾಸಿ ಮಂಗೇಶ ಗೌಡ ಸದ್ಯ ನಕಲಿ ವ್ಯದ್ಯನ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಗುಣವು ಆಗದೆ, ಕೆಲಸವು ಇಲ್ಲದೆ, ಸಂಕಟದ ಬೇಗುದಿ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಳಿ ಜ್ವರ ಕಡಿಮೆಯಾಗದ ಹಿನ್ನೆಲೆ ದಿವಾಕರ್ ಎಂಬ ವೈದ್ಯ ಚುಚ್ಚುಮದ್ದು ಹಾಗೂ ಒಂದಿಷ್ಟು ಗುಳಿಗೆ ನೀಡಿದ್ದರು ಎನ್ನಲಾಗ್ತಿದೆ. ವಿಚಿತ್ರ ಅಂದ್ರೆ ಆ ವೈದ್ಯ ಯಾರು ? ಎಲ್ಲಿರುತ್ತಾರೆ ? ಅವರ ಕ್ಲಿನಿಕ್ ಅಥವಾ ಆಸ್ಪತ್ರೆ ಇದೆಯೋ ಇಲ್ಲವೊ ಯಾವ ಮಾಹಿತಿಯೂ ಮಂಗೇಶ ಗೌಡರಿಗೆ ಗೊತ್ತಿಲ್ಲವಂತೆ.
ಆದರೆ ಮರುದಿನ ಕಾಲ ಮೇಲೆ ಗುಳ್ಳೆಗಳು ಎದ್ದು ದೊಡ್ಡದಾಗಿ ಕೊನೆಗೆ ಅಂಕೋಲಾ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿಯೂ ಸಾಧ್ಯವಾಗದೆ ಕಾರವಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ ಮಂಗೇಶ ಗೌಡ. ಘಟನೆಯಿಂದಾಗಿ ಮಂಗೇಶ ಕಾಲಿನಲ್ಲಿ ಗುಳ್ಳೆಗಳೆದ್ದು, ಚರ್ಮ ಸುಲಿದಿದೆ. ಎದ್ದು ಓಡಾಡಲಾಗದ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಇತ್ತ ಹೆಂಡತಿ ಮತ್ತು ಮಗ ಆರೈಕೆಯಲ್ಲಿ ತೊಡಗಿದ್ದು, ದುಡಿದು ತಿನ್ನಬೇಕಾದವರಿಗೆ ದಿಕ್ಕು ತೋಚದಂತಾಗಿದೆ.
ಗ್ರಾಮೀಣ ಭಾಗದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದ್ದು, ಇದಕ್ಕೆ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಗ್ರಾ. ಪಂ. ವ್ಯಾಪ್ತಿಯಲ್ಲಿ 24 ಗಂಟೆಯೂ ಸೇವೆ ಸಿಗುವ ಹಾಗೆ ಮಾಡಬೇಕು ಎನ್ನುತ್ತಾರೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ.
ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು ನಕಲಿ ವೈದ್ಯ ಯಾವ ಇಂಜಕ್ಷನ್ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ, ಆತ ಯಾರು ಎಂಬುದನ್ನು ಪತ್ತೆ ಹಚ್ಚಿ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಎಲ್ಲ ತಾಲೂಕುಗಳಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕಾರಣ ಹತ್ತಿರದ ಆಸ್ಪತ್ರೆಗೆ ತೋರಿಸಬೇಕೆ ವಿನಃ ಗೊತ್ತಿಲ್ಲದ ಯಾರಿಗೋ ತೋರಿಸುವುದು ಸರಿಯಲ್ಲ. ಈ ಬಗ್ಗೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಲಲಿತಾ ಶೆಟ್ಟಿ.