ಕಾರವಾರ (ಉತ್ತರಕನ್ನಡ) : 16 ವರ್ಷದ ಬಾಲಕಿ ಬಾಲ್ಯವಿವಾಹವಾಗಿ, ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ 52 ವರ್ಷದ ವ್ಯಕ್ತಿಯನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಬಂಧಿತನನ್ನು ಕಾರವಾರ ನಿವಾಸಿ ಅನಿಲ್(52) ಎಂದು ಗುರುತಿಸಲಾಗಿದೆ.
ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅನಿಲ್, ಜುಲೈ 19ರಂದು ನಗರದ ದೇವಾಲಯವೊಂದರಲ್ಲಿ 16 ವರ್ಷದ ಬಾಲಕಿಯೊಬ್ಬಳನ್ನು ಮದುವೆಯಾಗಿದ್ದ. ಯುವತಿ ದಷ್ಟಪುಷ್ಟವಾಗಿದ್ದ ಕಾರಣ ಆಗ ವಯಸ್ಸಿನ ಬಗ್ಗೆ ಯಾರು ಯೋಚಿಸಿರಲಿಲ್ಲ ಎನ್ನಲಾಗಿದೆ. ಆದರೆ ಅಂಗನವಾಡಿ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂದು ತಿಳಿಯುತ್ತಿದ್ದಂತೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಅಪ್ರಾಪ್ತೆಯ ಮದುವೆ ಸಂಬಂಧ ಎರಡೂ ಕುಟುಂಬದವರ ಮೇಲೆ ಪ್ರಕರಣ ದಾಖಲಾಗಿದೆ. ಜೊತೆಗೆ ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಸೇರಿ ಒಟ್ಟೂ 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಈ ಸಂಬಂಧ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತೆಯನ್ನು ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.
ಇದನ್ನೂ ಓದಿ : 14ರ ಅಪ್ರಾಪ್ತೆಯನ್ನು ಬಾಲ್ಯವಿವಾಹವಾದ 45ರ ಪ್ರಾಯದ ಅಂಕಲ್ ಅರೆಸ್ಟ್