ಕಾರವಾರ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಳಿಯಾಳ ಮೂಲದ ಶಾಲಿನಿ ಸಿದ್ದಿ ಎಂಬ ವಿದ್ಯಾರ್ಥಿನಿಯು ಐಎಎಸ್ ಶ್ರೇಣಿಯ ಅಧಿಕಾರಿಯಾಗಿ ಉತ್ತರ ಕನ್ನಡ ಜಿಪಂ ಸಿಇಒ ಹುದ್ದೆ ಅಲಂಕರಿಸಿದಳು.
ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೇರೇಪಿಸುವ ಮತ್ತು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಿಇಒ ಪ್ರಿಯಾಂಗಾ ಎಂ. ಅವರು, ವಿದ್ಯಾರ್ಥಿನಿ ಶಾಲಿನಿ ಸಿದ್ದಿ ಅವರಿಗೆ ಒಂದು ದಿನದ ಮಟ್ಟಿಗೆ ಅಧಿಕಾರ ಹಸ್ತಾಂತರಿಸಿದರು. ಅಲ್ಲದೆ ತಮ್ಮ ಕುರ್ಚಿಯ ಮೇಲೆ ಕೂರಿಸಿ ವಿದ್ಯಾರ್ಥಿನಿಯನ್ನು ಸತ್ಕರಿಸಿದರು.
ಶಾಲಿನಿಯು ಕುಸ್ತಿ ಪಟುವಾಗಿದ್ದು, ಕಾರವಾರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬಲು ಸರ್ಕಾರ ಮುಂದಾಗಿದೆ. ಓರ್ವ ಹೆಣ್ಣು ಮಗುವನ್ನು ಸಿಇಒ ಆಗಿ ನೇಮಿಸಿ ಅಧಿಕಾರದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಧಿಕಾರ ಸ್ವೀಕರಿಸಿದ ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿನಿಗೆ ಶುಭ ಕೋರಿದರು. ಅಲ್ಲದೆ ಸಿಇಒ ಪ್ರಿಯಾಂಗಾ ಎಂ. ಅವರು, ಪಂಚಾಯತ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಬಗ್ಗೆ ಕಿವಿಮಾತು ಹೇಳಿದರು. ಇದಕ್ಕೂ ಮೊದಲು ಜಿಪಂ ಸಭಾ ಭವನದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಉಪಸ್ಥಿತರಿದ್ದರು.