ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 6 ಮಂದಿ ಗುಣಮುಖರಾದ ಬೆನ್ನಲ್ಲೇ ಬೆಂಗಳೂರಿಗೆ ತೆರಳಿ ವಾಪಸ್ ಆದ ಬಸ್ ಕಂಡಕ್ಟರ್ ಸೇರಿದಂತೆ ಮತ್ತೆ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಹೌದು, ಕಾರವಾರದ ಕ್ರೀಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದು ಗಂಡು ಮಗು ಸೇರಿ ಐವರು ಗುಣಮುಖರಾಗಿದ್ದರು. ಅದರಲ್ಲಿ ಮಗು ಸೇರಿ ಹೊನ್ನಾವರದ ನಾಲ್ವರು ಹಾಗೂ ಹಳಿಯಾಳ ಮತ್ತು ಕಾರವಾರದ ತಲಾ ಓರ್ವ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಇದೀಗ ಸಂಜೆ ಹೊತ್ತಿಗೆ ಮತ್ತೆ ಆರು ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಅದರಲ್ಲಿ ಐವರು ಮಹಾರಾಷ್ಟ್ರದಿಂದ ವಾಪಸ್ ಆದವರಾಗಿದ್ದು, ಓರ್ವ ಮಾತ್ರ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳಿ ವಾಪಸ್ ಆದ ಕಂಡಕ್ಟರ್ ಆಗಿದ್ದಾನೆ. ಈತನಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಆತನಿಗೆ ಸೋಂಕು ದೃಢಪಟ್ಟಿದ್ದು, ಈತನ ರೂಮ್ನಲ್ಲಿದ್ದ ಇತರೆ 6 ಮಂದಿ ಕೆಎಸ್ಆರ್ಟಿಸಿ ಸಿಬ್ಬಂದಿಗೂ ಕ್ವಾರಂಟೈನ್ಗೆ ಸೂಚಿಸಿ ಗಂಟಲು ದ್ರವ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಅಧಿಕವಾಗುತ್ತಲೇ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ.