ಕಾರವಾರ: ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)ಯಲ್ಲಿ 6 ಕಿಲೋ ಲೀಟರ್ ಲಿಕ್ವಿಡ್ ಆಕ್ಸಿಜನ್ ಸ್ಟೋರೇಜ್ ಪ್ಲಾಂಟ್ ಮತ್ತು ಕೋವಿಡ್ ಐಸಿಯುವಿನಲ್ಲಿ ಪ್ರತಿ ನಿಮಿಷಕ್ಕೆ 390 ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದಿಸುವ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್ ಲೈನ್ ಕಾಮಗಾರಿಗಾಗಿ ಅವಶ್ಯವಿರುವ ಸಿವಿಲ್ ಮತ್ತು ವಿದ್ಯುತ್ ಹಾಗೂ ಇತರೆ ಕಾಮಗಾರಿಗಳನ್ನು ರೂ. 57.17 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳುವ ಪ್ರಸ್ತಾವನೆಗೆ ಮಂಜೂರಾತಿ ನೀಡಲಾಗಿದೆ. ಈ ಮಂಜೂರಾತಿಯಲ್ಲಿ ಕಾರವಾರ ಕ್ರಿಮ್ಸ್ಗೂ 1.15 ಕೋಟಿ ಅನುಮೋದನೆಯಾಗಿದೆ.
ಜಿಲ್ಲೆಯಲ್ಲಿ ಕೊವಿಡ್ -19ರ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆ, ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕನಿಷ್ಠ 6 ಕಿಲೋ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಅಳವಡಿಸುವಂತೆ ಇಂಜಿನಿಯರಿಂಗ್ ಧಾರವಾಡ/ ಕಾರವಾರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಕೋರಿದ್ದರು. ಅವರ ಕೋರಿಕೆಯಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರು 6 ಕಿಲೋ ಲೀಟರ್ ಸಾಮರ್ಥ್ಯದ ಎಲ್.ಎಂ.ಒ ಟ್ಯಾಂಕ್ಅನ್ನು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅಳವಡಿಸುವ ಸಲುವಾಗಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದರು .
ಇದನ್ನೂ ಓದಿ: ಬೆಡ್ ಬ್ಲಾಕ್ ಹಗರಣ: ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಆಗಲಿ- MLC ಫಾರೂಕ್
ರಾಜ್ಯ ವಿಪತ್ತು ನಿರ್ವಹಣಾ ನಿಧಿ / ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಟ್ಯಾಂಕ್ ಕಾಮಗಾರಿಗೆ 29.27 ಲಕ್ಷ ಹಾಗೂ ಇದಕ್ಕೆ ಸಂಬಂಧಿಸಿದ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳ ಅಂದಾಜು ಮೊತ್ತ 41.23 ಲಕ್ಷ, ಒಟ್ಟಾರೆ 70.50 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕದ ಮುಖ್ಯ ಇಂಜಿನಿಯರ್ ಕೋರಿದ್ದರು. ಅದರಂತೆ ಮೆ. ಐನಾಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕ್ರಿಮ್ಸ್ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಥಾಪಿಸಲು ಒಪ್ಪಿದೆ.