ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದಾಗಿ ಕೊರೊನಾ ವೈರಸ್ ಪ್ರಕರಣಗಳು ಹತೋಟಿಗೆ ಬಂದಿವೆ. ಆದರೆ ಇದೀಗ ಮತ್ತೊಂದು ಖುಷಿ ವಿಚಾರ ಹೊರಬಿದ್ದಿದ್ದು, ಕೊರೊನಾ ಸೋಂಕಿನಿಂದ ದಾಖಲಾಗಿದ್ದ ಭಟ್ಕಳ ಮೂಲದ 5 ಸೋಂಕಿತರು ಗುಣಮುಖರಾಗಿದ್ದಾರೆ.
ಹೌದು, ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗಿ ಆತಂಕ ಸೃಷ್ಟಿಸುತ್ತಿರುವ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಬಂದಿದೆ. ದುಬೈನಿಂದ ಆಗಮಿಸಿದ ಹಾಗೂ ಅವರ ಸಂಪರ್ಕಕ್ಕೆ ಬಂದ ಭಟ್ಕಳ ಮೂಲದವರಿಗೆ ಸೋಂಕು ತಗುಲಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 5 ಸೋಂಕಿತರಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿದೆ.
ಈಗಾಗಲೇ ಈ ಬಗ್ಗೆ ಗಂಟಲು ದ್ರವ ಪರೀಕ್ಷೆ ನಡೆಸಿ ಖಚಿತಪಡಿಸಿಕೊಂಡಿರೊ ವೈದ್ಯರು ಐದು ಜನರನ್ನು ಇಂದು ಕಾರವಾರದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಆದರೆ ಇವರನ್ನು ಮನೆಗೆ ಕಳುಹಿಸದೆ ಹೊಟೇಲ್ ಗಳಲ್ಲಿ ಇಟ್ಟು ಕ್ವಾರಂಟೈನ್ ನಡೆಸಲಾಗುತ್ತದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ ಮೂಲದ ಒಟ್ಟು 10 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲಿ ಮಂಗಳೂರಿನಲ್ಲಿ ದಾಖಲಾಗಿದ್ದ ಓರ್ವರು ಸೇರಿ ಪತಂಜಲಿ ಆಸ್ಪತ್ರೆಯಿಂದ ಇಬ್ಬರು ಗುಣಮುಖರಾಗಿ ಇತ್ತೀಚೆಗೆ ಡಿಸ್ಚಾರ್ಜ್ ಆಗಿದ್ದರು. ಇದೀಗ ಮತ್ತೆ ಐವರು ಗುಣಮುಖರಾಗಿದ್ದು, ಇನ್ನು ಓರ್ವ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಹಾಗೂ ಗರ್ಭಿಣಿಯೊಬ್ಬರು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಕೂಡ ಸುಧಾರಿಸಿದ್ದು, ಒಂದೆರಡು ದಿನದಲ್ಲಿ ಗುಣಮುಖವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.