ಶಿರಸಿ: ಮನೆಯ ಎದುರು ಆಟ ಆಡುತ್ತಿದ್ದ 3 ವರ್ಷದ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆನರಾ ಗಲ್ಲಿಯಲ್ಲಿ ನಡೆದಿದೆ.
ನೆಹರೂ ನಗರದ ಕೆನರಾ ಗಲ್ಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಪಾಳೇದ್ ಮತ್ತು ಲಲಿತಾ ದಂಪತಿಯ ಮಗ ಬಸವರಾಜ ಯಲ್ಲಪ್ಪ ಪಾಳೇದ್ ಮೃತಪಟ್ಟ ಮಗು.
ಅಪ್ಪ, ಅಮ್ಮ ಕೂಲಿ ಕೆಲಸಕ್ಕೆ ತೆರಳಿದ್ದಾಗ 9 ವರ್ಷದ ಅಕ್ಕನೊಂದಿಗೆ ಮನೆಯಲ್ಲಿ ಆಟವಾಡಿಕೊಂಡಿದ್ದ ಮಗು ಮಳೆ ನೀರು ಶೇಖರಿಸಲು ಮಾಡಿದ್ದ ನೆಲ ಮಟ್ಟದ ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಈ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.