ಶಿರಸಿ: ಕಳೆದ ಮೂರು ದಿನಗಳ ಹಿಂದೆ ಶಿರಸಿಯಲ್ಲಿ ಸ್ಪೋಟಗೊಂಡಿದ್ದ ಕೊರೊನಾ ಸೋಂಕಿಗೆ ಒಬ್ಬನೇ ವ್ಯಕ್ತಿ ಕಾರಣ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದ್ದು, ಒಂದು ಸೋಂಕಿತನಿಂದ ಶಿರಸಿಯ 21 ಜನರಿಗೆ ಕೊರೊನಾ ಸೋಂಕು ಹಬ್ಬಿದೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.
ಕಳೆದ ವಾರ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಸಮೀಪದ ಚಾಲಕನಿಗೆ ಸೋಂಕು ಪತ್ತೆಯಾಗಿತ್ತು. ನಂತರ ಅದೇ ವ್ಯಕ್ತಿಯಿಂದ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿ, ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಅವರ ಪ್ರಾಥನಿಕ ಸಂರ್ಪಕದಲ್ಲಿ ಇರುವವರಲ್ಲಿ ಇನ್ನೂ ಆತಂಕದ ಛಾಯೆ ಮುಂದುವರೆದಿದೆ.
ಸೋಂಕಿತ ಚಾಲಕ ಮಾರಿಕಾಂಬಾ ದೇವಸ್ಥಾನದ ಭಕ್ತನಾಗಿದ್ದು, ಪ್ರತಿ ದಿವಸ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಶಿರಸಿಯ ಖಾಸಗಿ ಟ್ರಾನ್ಸಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುವ ಈತ ಹುಬ್ಬಳ್ಳಿಯ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಈತನಿಂದ ದೇವಸ್ಥಾನದ 13 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಜೊತೆಗೆ ದೇವಸ್ಥಾನದ ಸಿಬ್ಬಂದಿಯ ಪ್ರಾಥನಿಕ ಸಂಪರ್ಕದಲ್ಲಿದ್ದ ಇನ್ನೂ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಎಲ್ಲವೂ ಒಂದೇ ದಿನ ವರದಿ ಬಂದಿದೆ.
ಸೋಂಕಿತ ಚಾಲಕನ ಪತ್ನಿ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿಯಾಗಿದ್ದು, ಆಕೆಯಿಂದ ಬ್ಯಾಂಕಿನ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೂ ಸೋಂಕು ತಗುಲಿದ್ದು, ಪತ್ನಿಯೂ ಸೇರಿ ಚಾಲಕನಿಂದ ಒಟ್ಟೂ 21 ಜನರಿಗೆ ಕೋವಿಡ್ ದೃಢಪಟ್ಟಿದೆ.
ಸೋಂಕಿತರ ಸಂಖ್ಯೆ ಇಲ್ಲಿಗೆ ಮುಗಿಯದೇ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ದೇವಾಲಯದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲು ದ್ರವವನ್ನು ಸಹ ಪಡೆಯಲಾಗಿದೆ. ಇದರ ಜೊತೆಗೆ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಸೀಲ್ಡೌನ್ ಮಾಡಲಾಗಿದೆ.
ಗಂಟಲು ದ್ರವ ಪರೀಕ್ಷೆಯಲ್ಲಿ ಅನೇಕರಿಗೆ ಪಾಸಿಟಿವ್ ಬರುವ ಸಾಧ್ಯತೆಗಳು ಇದೆ ಎನ್ನಲಾಗಿದ್ದು, ಅವರೆಲ್ಲರ ಮೂಲವೂ ಸೋಂಕಿತ ಚಾಲಕ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವೇ ಕಾರಣ ಆಗಲಿದೆ. ಇದರಿಂದ ಒಬ್ಬ ವ್ಯಕ್ತಿಯ ನಿಶ್ಕಾಳಜಿಯಿಂದ ಶಿರಸಿಯಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ ಎಂಬುದು ಜನರ ಆತಂಕವಾಗಿದೆ.
ಮತ್ತೊಂದು ಪಾಸಿಟಿವ್:
ಇನ್ನು ಶಿರಸಿಯಲ್ಲಿ ಭಾನುವಾರ ಕೊಂಚ ರಿಲೀಫ್ ನೀಡಿದ್ದ ಕೊರೊನಾ, ಸೋಮವಾರ ಮತ್ತೆ ಕಾಣಿಸಿಕೊಂಡಿದೆ. ಇಲ್ಲಿನ ರಾಮನಬೈಲಿನ ಗುಜರಿ ವ್ಯಾಪಾರಿಯೋರ್ವನಿಗೆ ಕೋವಿಡ್-19 ದೃಢಪಟ್ಟಿದ್ದು, ಶಿರಸಿಯಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿದೆ.
ಟ್ರಾವೆಲ್ ಹಿಸ್ಟರಿ ಇಲ್ಲ:
ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಗುಜರಿ ವ್ಯಾಪಾರಿಗೆ ಜ್ವರ ಸೇರಿದಂತೆ ಇತರೆ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಆತನ ಟ್ರಾವೆಲ್ ಹಿಸ್ಟರಿ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ನಂತರ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು.
ಕ್ವಾರೆಂಟೈನ್ ಆಗುವ ಮೊದಲು ಆತನ ಟ್ರಾವೆಲ್ ಹಿಸ್ಟರಿ ಕುರಿತು ಈಗ ತನಿಖೆ ನಡೆಯುತ್ತಿದ್ದು, ಅದಕ್ಕೂ ಮೊದಲು ಎಲ್ಲೆಲ್ಲಿ ಓಡಾಡಿದ್ದ ಎನ್ನುವುದು ತಿಳಿಯಬೇಕಿದೆ. ಬೆಂಗಳೂರು ಸೇರಿದಂತೆ ಇತರೆ ಪ್ರದೇಶದಿಂದ ಬಂದ ಹಿಸ್ಟರಿ ಇರುವುದಿಲ್ಲ. ಬದಲಾಗಿ ಸ್ಥಳೀಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವ ಸಾಧ್ಯತೆಗಳಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕಿತನ ಪ್ರಾಥನಿಕ ಸಂಪರ್ಕ ಹಾಗೂ ಟ್ರಾವೆಲ್ ಹಿಸ್ಟರಿ ಅರಿಯುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.