ಕಾರವಾರ (ಉತ್ತರ ಕನ್ನಡ): ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ರಾತ್ರಿ ಮೀನುಗಾರರು ಸಾಂಪ್ರದಾಯಿಕ ಏಂಡಿ ಮೀನುಗಾರಿಕೆ ನಡೆಸುತ್ತಿದ್ದಾಗ 15.9 ಕೆ.ಜಿ ತೂಕದ ಅಪರೂಪದ ಕುಡಗೇರಿ ಮೀನು ಬಲೆಗೆ ಬಿದ್ದಿದೆ. ಸಾಮಾನ್ಯವಾಗಿ ಸಣ್ಣ ಮೀನುಗಳು ಸಿಗುವ ಏಂಡಿ ಮೀನುಗಾರಿಕೆಯಲ್ಲಿ ಬೃಹತ್ ಗಾತ್ರದ ಮೀನು ಕಂಡು ಮೀನುಗಾರರೇ ಅಚ್ಚರಿಗೊಂಡರು. ಭಾನುವಾರ ಬೆಳಿಗ್ಗೆ ವಾಯು ವಿಹಾರಕ್ಕೆಂದು ಕಡಲ ತೀರಕ್ಕೆ ಬಂದವರು ದೊಡ್ಡ ಗಾತ್ರದ ಮೀನು ಕಂಡು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೀನನ್ನು ಕೆ.ಜಿಗೆ 500 ರೂಪಾಯಿಯಂತೆ ಸ್ಥಳೀಯ ಹೊಟೇಲ್ ಒಂದಕ್ಕೆ ಮಾರಾಟ ಮಾಡಲಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಸಾಲಾಗಿ ರಸ್ತೆ ದಾಟಿದ ಗಜಪಡೆ: ಎರಡು ಮರಿಗಳನ್ನು ಒಳಗೊಂಡ ಆನೆಗಳ ಹಿಂಡೊಂದು ಒಂದರ ಹಿಂದೆ ಒಂದರಂತೆ ಸಾಲಾಗಿ ರಸ್ತೆ ದಾಟುವ ದೃಶ್ಯ ದಾಂಡೇಲಿ ಕುಳಗಿ-ಭಾಗವತಿ ಮಾರ್ಗದಲ್ಲಿ ಕಂಡುಬಂತು. ಎರಡು ಮರಿಗಳು ಸೇರಿ ಒಟ್ಟು 10 ಆನೆಗಳು ರಸ್ತೆ ದಾಟುತ್ತಿದ್ದು ಗಜಪಡೆಯ ಗುಂಪಿನ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಹಿಂಡು ಸಾಲಾಗಿ ರಸ್ತೆ ದಾಟುವ ತನಕ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಅಲ್ಲಿಯೇ ನಿಂತು ಬಳಿಕ ತೆರಳಿದರು. ಒಂದರ ಹಿಂದೆ ಒಂದರಂತೆ ಪರೇಡ್ ನಡೆಸಿರುವ ಆನೆಗಳು ಆಹಾರ ಅರಸಿ ಬೇರೆ ಕಡೆಗೆ ತೆರಳುತ್ತಿದ್ದವು ಎನ್ನಲಾಗಿದೆ. ಈ ಭಾಗದಲ್ಲಿ ಆನೆಗಳು ಕಾಣ ಸಿಗುವುದು ಹೊಸದೇನಲ್ಲ. ಆಗಾಗ ಒಂಟಿ ಆನೆ ಸೇರಿದಂತೆ ಈ ರೀತಿ ಗಡಪಡೆ ಕಂಡುಬರುತ್ತದೆ ಎಂದು ಸ್ಥಳೀಯರು ತಿಳಿಸಿದರು.
40 ಅಡಿ ಬಾವಿಗೆ ಬಿದ್ದ ಎತ್ತು ರಕ್ಷಣೆ: ಅಂದಾಜು 40 ಅಡಿ ಆಳದ ಬಾವಿಗೆ ಎತ್ತು ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಕಾರವಾರ ತಾಲೂಕಿನ ಅಂಬ್ರಾಯಿ ಬಳಿಯ ಸಾತಗೇರಿಯಲ್ಲಿ ನೀರಿಲ್ಲದ ಬಾವಿಗೆ ಎತ್ತು ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಎತ್ತಿಗೆ ಹಗ್ಗ ಕಟ್ಟಿ ಮೇಲಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಾಯಹಸ್ತ ಚಾಚಿದ್ದರು.
ಸುಮಾರು ಒಂದು ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆ ನಡೆದಿದ್ದು, ಎತ್ತು ಆರೋಗ್ಯವಾಗಿದೆ ಎಂದು ತಿಳಿದ ಬಳಿಕ ಸಿಬ್ಬಂದಿ ಅದಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಅಗ್ನಿಶಾಮಕ ದಳದ ಅಧಿಕಾರಿ ಮದನ ಕೆ. ನಾಯ್ಕ, ಸಪ್ನಿಲ ಜಿ. ಪೆಡ್ನೆಕರ, ಸಿಬ್ಬಂದಿಯಾದ ಸುನಿಲ ನಾಯ್ಕ, ನಂದೀಶ, ವೀರಬದ್ರಯ್ಯ ಚಕ್ಕಮಠ, ನಾಗರಾಜ ಜಿ. ನಾಯ್ಕ ಹಾಗೂ ಅರುಣ ಕುಮಾರ ಭಾಗಿಯಾಗಿದ್ದರು. ತುರ್ತು ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಇದನ್ನೂ ಓದಿ: ಯಲ್ಲಾಪುರದಲ್ಲಿ ಹೊಸ ಕುಲದ ಏಡಿ ಪತ್ತೆ: "ಆರಾಧ್ಯ ಪ್ಲಾಸಿಡಾ" ಎಂದು ನಾಮಕರಣ