ಭಟ್ಕಳ: ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಸಭಾಂಗಣದಲ್ಲಿ, ಭಾರತ ಚುನಾವಣಾ ಆಯೋಗ, ತಾಲೂಕು ಆಡಳಿತ ಭಟ್ಕಳ ಇವರ ಆಶ್ರಯದಲ್ಲಿ ನಡೆದ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭವನ್ನು, ಭಟ್ಕಳ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವವು ಸದೃಢವಾಗಬೇಕಾದರೆ ಸಮಾಜ, ಸರ್ಕಾರ ಹೇಗೆ ಅವಶ್ಯಕತೆಯೋ ಹಾಗೇ ಆಯ್ಕೆಗೊಂಡ ಜನಪ್ರತಿನಿಧಿಗಳು ಮತದಾರರ ಆಶೋತ್ತರ ಈಡೇರಿಸಬೇಕಾಗಿರುವುದು ಅಷ್ಟೇ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಜನರಲ್ಲಿ ಮತದಾನದ ಜಾಗೃತಿ, ಅರಿವು ಮೂಡಿಸುವ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ. ಪ್ರಜಾಪ್ರಭುತ್ವದ ಬಗ್ಗೆ ಪ್ರತಿಯೊಬ್ಬ ಮತದಾರ ತಿಳಿದುಕೊಳ್ಳಬೇಕು. ಮೂಲ ಹಕ್ಕು ಪಡೆಯಲು ಮತದಾನ ಮಾಡಬಾರದು ದೇಶಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳುವಿಕೆ ನಮ್ಮ ಕರ್ತವ್ಯ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಯುವ ಹಾಗೂ ನೂತನ ಮತದಾರರಿಗೆ ಸ್ಮಾರ್ಟ್ ಕಾರ್ಡ್ ರೂಪದ ಮತದಾನದ ಗುರುತಿನ ಚೀಟಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು, ಸಹಾಯಕ ಆಯುಕ್ತರು, ತಹಸೀಲ್ದಾರ್ ಸೇರಿದಂತೆ ಗಣ್ಯರು ವಿತರಿಸಿದರು. ತಾಲೂಕು ಮಟ್ಟದಲ್ಲಿ ತಾಲುಕಾಡಳಿತದಿಂದ ಆಯೋಜಿಸಲಾದ ಪ್ರಬಂಧ ಹಾಗೂ ನಾಟಕದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.