ಉಡುಪಿ : ಛತ್ರಪತಿ ಶಿವಾಜಿ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಿದ್ದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಶಂಕಪುರದಲ್ಲಿ ನಡೆದಿದೆ.
ಮೂರು ಯುವಕರ ತಂಡವೊಂದು ಮಂಗಳೂರಿಂದ ಉಡುಪಿಗೆ ನಾವು ಛತ್ರಪತಿ ಶಿವಾಜಿ ಸೇವಾ ಬಳಗ ಎಂದು ಹೇಳಿಕೊಂಡು ಬಂದಿದ್ದಾರೆ. ಕಾವೂರಿನಲ್ಲಿ ಸಮಿತಿಯ ಮೊದಲ ವರ್ಷದ ವಾರ್ಷಿಕೋತ್ಸವ ಮಾಡುತ್ತಿರುವುದಾಗಿ ಹೇಳಿ ಆಮಂತ್ರಣ ಪತ್ರಿಕೆ ಕೊಟ್ಟು ಧನ ಸಂಗ್ರಹ ಮಾಡುತ್ತಿತ್ತು. ಆದರೆ ಈ ತಂಡಕ್ಕೂ ಕಾವೂರಿನ ಸಮಿತಿಗೂ ಸಂಬಂಧವಿಲ್ಲ. ನೂರಾರು ಆಮಂತ್ರಣ ಪತ್ರಿಕೆ ತಂದು ಚಂದಾ ವಸೂಲಿ ಮಾಡಿ ಹಣ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಯುವಕರು ಶಂಕರಪುರದಲ್ಲಿ ಜನರಿಂದ ಸಂಗ್ರಹ ಮಾಡಿದ್ದ ಹಣದಲ್ಲಿ ಮದ್ಯಪಾನ ಮಾಡಿ ಸ್ಥಳೀಯರ ಜೊತೆ ಅನುಚಿತವಾಗಿ ವರ್ತಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ವಿಚಾರಿಸಿದಾಗ ಚಂದಾ ವಸೂಲಿ ಹಣದಲ್ಲಿ ಅವ್ಯವಹಾರ ಮಾಡಿತ್ತಿರುವ ವಿಷಯ ತಿಳಿದಿದೆ. ಸ್ಥಳೀಯರು ಯುವಕರಿಗೆ ಥಳಿಸಿ ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.