ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕನೋರ್ವ ಪರಾರಿಯಾಗಿರುವ ಘಟನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ ಮೃತಪಟ್ಟಿದ್ದಾಳೆ.
ನಿನ್ನೆ ಸಂಜೆ 6:30 ರ ಸುಮಾರಿಗೆ ರಿಕ್ಷಾದಲ್ಲಿ ಯುವತಿಯನ್ನು ಕರೆ ತಂದಿದ್ದ ಯುವಕ, ಯುವತಿಯ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
ವಿವಾಹಿತನಾಗಿರುವ ಪ್ರವೀಣ್ ಕುಂದರ್ಗಾಗಿ ಈಗ ಯುವತಿಗೆ ಹೇಗೆ ಪರಿಚಯ, ಎಲ್ಲಿಂದ ಕರೆ ತಂದಿದ್ದ ಅನ್ನೋದ್ರ ಬಗ್ಗೆ ಹಿರಿಯಡ್ಕ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಯುವತಿ ಮೃತದೇಹ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಗಾಯಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ಉದ್ಭವಿಸಿದೆ. ಅಲ್ಲದೆ ಯುವತಿ ಮೃತದೇಹದಲ್ಲಿ ಆಲ್ಕೋಹಾಲ್ ಕಂಟೆಂಟ್ ಕೂಡ ಪತ್ತೆಯಾಗಿದ್ದು, ವೈದ್ಯರು ವರದಿ ನೀಡಿದ್ದಾರೆ. ಯುವತಿ ಪೋಷಕರು ನಗರ ಠಾಣೆಯಲ್ಲಿ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.