ಉಡುಪಿ: ಕೋವಿಡ್ ಮೇಲಿಂದ ಮೇಲೆ ಕಾಡುತ್ತಿದ್ದರೂ ಕುಂದಾಪುರ ತಾಲೂಕು ಸರ್ಕಾರಿ ಕೊವೀಡ್ ಕೇರ್ ಆಸ್ಪತ್ರೆಯಲ್ಲಿ ಜೀವ ಕಳೆ ಬಂದಿದೆ. ಕಳೆದ ಬಾರಿ ಇದೇ ಆಸ್ಪತ್ರೆಯಲ್ಲಿ ಓರ್ವ ಫಿಸಿಶಿಯನ್ ಒಂದಿಷ್ಟು ವೈದ್ಯರ ಜೊತೆ ಕೋವಿಡ್ ವಿರುದ್ಧ ಹಗಲಿರುಳು ಶ್ರಮಿಸಿ ಹೈರಾಣಾಗಿದ್ದರು. ಆದರೆ, ಈ ಬಾರಿ ಯುವ ಡಾಕ್ಟರ್ ಪಡೆಯೊಂದು ಕೋವಿಡ್ ಕೇರ್ ಆಸ್ಪತ್ರೆಯ ನೆರವಿಗೆ ನಿಂತು ಸಹಕರಿಸುತ್ತಿದೆ.
ಓದಿ: ಥೂ..! ಯಾಕಾದ್ರೂ ಮದುವೆ ಆಗ್ತಿದಿನೋ... ನವ ಜೋಡಿಗೆ ಲಾಕ್ಡೌನ್ ಸಂಕಷ್ಟ
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಡ್ ಗಳನ್ನು ಹೊಂದಿರುವ ತಾಲೂಕು ಆಸ್ಪತ್ರೆ ಕುಂದಾಪುರದಲ್ಲಿದೆ. ಇಲ್ಲಿ ಉನ್ನತ ಮಟ್ಟದ ವ್ಯವಸ್ಥೆ ಇದ್ದರೂ ಕೂಡ, ಕಳೆದ ಬಾರಿ ಹೊಸದಾಗಿ ಪ್ರಪಂಚವನ್ನೇ ಕಾಡಿದ್ದ ಕೊರೊನಾ ವೈರಸ್ ಇಲ್ಲಿನ ವೈದ್ಯರಿಂದ ಹಿಡಿದ ಗ್ರೂಪ್-ಡಿ ನೌಕರ ವರ್ಗದ ವರೆಗೆ ಕಾಡಿತ್ತು. ಲಭ್ಯವಿರುವ ಸ್ಟಾಫ್ ಗಳನ್ನು ಬಳಸಿಕೊಂಡು ಕಳೆದ ಬಾರಿ ಕುಂದಾಪುರ ತಾಲೂಕು ಕೋವಿಡ್ ಕೇರ್ ಆಸ್ಪತ್ರೆ ಮೊದಲನೇ ಸುತ್ತಿನಲ್ಲಿ ಸಹಕರಿಸುತ್ತಿದೆ.
ಸದ್ಯ ಬಂದಿರುವ ಕೊರೊನಾ ಎರಡನೇಯ ಅಲೆ ಬಲು ಭೀಕರವಾಗಿರುವ ಹಿನ್ನೆಲೆ, ಕುಂದಾಪುರ ಸರ್ಕಾರಿ ತಾಲೂಕು ಆಸ್ಪತ್ರೆ ಸರ್ವ ಸನ್ನದ್ಧವಾಗಿದೆ. ರೋಗಿಗಳ ಶುಶ್ರೂಷೆಗೆ ಸದ್ಯ 4 ಜನ ಯುವ ವೈದ್ಯರ ತಂಡ ಕಣಕ್ಕಿಳಿದಿರುವುದು ಆಸ್ಪತ್ರೆಗೆ ಜೀವ ಕಳೆ ನೀಡಿದೆ. ಈ ಯುವ ವೈದ್ಯರುಗಳಿಗೆ ಹಿರಿಯ ಫಿಸಿಶಿಯನ್ ಡಾ.ನಾಗೇಶ್ ಪುತ್ರನ್ ಮಾರ್ಗದರ್ಶನ ಮಾಡುತ್ತಿದ್ದಾರೆ.
ಸ್ಥಳೀಯ ಯುವ ವೈದ್ಯರಾದ ಡಾ. ಆಶಿತ್ ಶೆಟ್ಟಿ, ಡಾ.ರಜತ್ ಶೆಟ್ಟಿ, ಡಾ.ರಚನಾ ಶೆಟ್ಟಿ ಮತ್ತು ಡಾ. ನಿವೇದಿತಾ ಸದ್ಯ ಕುಂದಾಪುರ ಕೊವೀಡ್ ಕೇರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈಯಲ್ಲಿದ್ದ ಡಾ.ರಚನಾ ಶೆಟ್ಟಿ ತಮ್ಮ ತಂದೆಯ ನಿಧನದ ಹಿನ್ನೆಲೆಯಲ್ಲಿ ಊರಿಗೆ ಬಂದವರು, ನೋವಿನಲ್ಲಿಯು ಕೋವಿಡ್ ಕೇರ್ ನಲ್ಲಿ ಇನ್ನೊಬ್ಬರ ನೋವು ಒರೆಸುವ ಕಾರ್ಯದಲ್ಲಿದ್ದಾರೆ.
ಸಹೋದರರಾದ ಡಾ.ಆಶಿತ್ ಮತ್ತು ಡಾ.ರಜತ್ ಶೆಟ್ಟಿ ಅವರಿಗೆ ಮುಂಬೈನಲ್ಲಿ ಸ್ವಂತದ ಖಾಸಗಿ ಆಸ್ಪತ್ರೆ ಇದ್ದರೂ ಕೂಡ, ಊರಿನವರ ಕಷ್ಟದ ಸಂದರ್ಭದಲ್ಲಿ ನೆರವು ನೀಡುವ ಸಲುವಾಗಿ ಕೋವಿಡ್ ಕೇರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದಂತೆ ಡಾ. ನಿವೇದಿತಾ ಕೂಡ ಸರ್ಕಾರಿ ಕೋವಿಡ್ ಕೇರ್ ಗೆ ಬಲನೀಡುವ ನಿಟ್ಟಿನಲ್ಲಿ ಆಸ್ಪತ್ರೆಗೆ ಸಾಥ್ ನೀಡುತ್ತಿದ್ದಾರೆ. ದೇಶವೇ ಸಂಕಷ್ಟದಲ್ಲಿದೇ ಈ ಸಂದರ್ಭದಲ್ಲಿ ವೈದ್ಯರ ಅಗತ್ಯತೆ ಇದೆ. ಯಾವುದೇ ಭಯ ಬೇಡ ಮುಂದೆ ಬಂದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ ಅಂತಾರೆ ಈ ಯುವ ವೈದ್ಯರು.
ಒಟ್ಟಾರೆಯಾಗಿ ಈ ಯುವ ವೈದ್ಯರ ಪಡೆ ರೋಗಿಗಳಿಗೆ ಹುರಿದುಂಬಿಸುವ ಜೊತೆಗೆ ಕೋವಿಡ್ ಗೆಲ್ಲಲು ಚಿಕಿತ್ಸೆ ನೀಡುತ್ತಿದ್ದಾರೆ. ಯುವ ವೈದ್ಯರ ಈ ಕಾರ್ಯದ ಕುರಿತು ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಯುವ ವೈದ್ಯರ ಸೇವೆ ಇನ್ನುಳಿದ ಯುವಕರಿಗೆ ಪ್ರೇರಣೆಯಾಗಲಿ.