ಉಡುಪಿ: ನಾಳೆ ಯೋಗ ದಿನಾಚರಣೆ. ಈ ಹಿನ್ನೆಲೆ ಜಿಲ್ಲೆಯ ಸಾಲಿಗ್ರಾಮದಲ್ಲಿ ಪ್ರತಿದಿನ ನಡೆಸಲಾಗುವ ಯೋಗ ಯಜ್ಞವನ್ನು ಇಂದು ನೆನೆಯಲೇಬೇಕು. ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಯೋಗ ಕೇಂದ್ರಕ್ಕೆ ಬರುತ್ತಾರೆ. ಬಂದು ತಮ್ಮ ಆರೋಗ್ಯ, ಆಯುಷ್ಯ ಎರಡನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾಲಿಗ್ರಾಮದ ಯೋಗ ಗಮನ ಸೆಳೆದಿದೆ.
ಇಲ್ಲಿರುವುದು ಸ್ವಾಮಿ ವಿವೇಕಾನಂದರ ಕುರಿತು ಜೀವನ ಪಾಠವನ್ನು ಹೇಳಿಕೊಡುವ ಡಿವೈನ್ ಪಾರ್ಕ್ ಆಧ್ಯಾತ್ಮಿಕ ಕೇಂದ್ರ. ಕಳೆದ 10 ವರ್ಷಗಳಿಂದ ಡಾ. ವಿವೇಕ್ ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮತ ಜೊತೆಗೆ ಉಚಿತ ಯೋಗ ಯಜ್ಞ ನಡೆಸಿಕೊಂಡು ಬರಲಾಗುತ್ತಿದೆ.
ಆಧ್ಯಾತ್ಮಿಕ ಕೇಂದ್ರಕ್ಕೆ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಬರುತ್ತಾರೆ. ತಲೆ ನೋವು, ಮಂಡಿ ನೋವು, ಸಂಧಿ ವಾತ, ಬೆನ್ನು ನೋವು ಎಂದು ಆಪರೇಶನ್ ಅಂತ ಆಸ್ಪತ್ರೆ ಬಾಗಿಲು ತಟ್ಟಿ ಬಂದ ನೂರಾರು ಜನ ಇಲ್ಲಿಗೆ ಬಂದು ಸಂಪೂರ್ಣ ಗುಣಮುಖರಾಗಿದ್ದಾರೆ.
ಕಳೆದ 10 ವರ್ಷದಲ್ಲಿ ಲಕ್ಷಾಂತರ ಮಂದಿ ಇಲ್ಲಿ ನಡೆಯೋ ಯೋಗ ಪರ್ವ, ಸುಲಭ ಹಾಗೂ ವೈಜ್ಞಾನಿಕ ಯೋಗ ಶಿಬಿರದಲ್ಲಿ ಭಾಗವಹಿಸಿ ನೆಮ್ಮದಿ ಕಂಡುಕೊಂಡಿದ್ದಾರೆ. ಸಾವಿರಾರು ಜನರಿಗೆ ವೈಜ್ಞಾನಿಕ ಯೋಗದ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದರ ಮೂಲಕ ಜನರ ಆರೋಗ್ಯಮಟ್ಟವನ್ನು ಹೆಚ್ಚಿಸುವುಲ್ಲಿ ಈ ಆಧ್ಯಾತ್ಮಿಕ ಕೇಂದ್ರ ಸಹಾಯಕವಾಗಿದೆ ಎನ್ನುತ್ತಾರೆ ಇಲ್ಲಿನ ಯೋಗ ಶಿಬಿರಾರ್ಥಿಗಳು.
ಇನ್ನು ಯೋಗ ದಿನಾಚರಣೆ ಅನ್ನೋದು ಯೋಗ ದಿನಕ್ಕೆ ಮಾತ್ರ ಸೀಮಿತವಾಗಿರದೆ ನಿತ್ಯದ ಚಟುವಟಿಕೆಯಾಗಬೇಕು ಅನ್ನೊಂದು ಯೋಗ ಕಾಶಿ ಡಿವೈನ್ ಪಾರ್ಕ್ ಆಶಯವಾಗಿದೆ.