ಉಡುಪಿ: ಕೊರೊನಾ ಪ್ರಚೋದಿತ ಲಾಕ್ಡೌನ್ನಿಂದ ಅನೇಕರ ಬದುಕು ಸಂಕಷ್ಟಕ್ಕೀಡಾಗಿತ್ತು. ಆದರೆ ಕುಟುಂಬಸ್ಥರು ಕೆಲಸ ಕಳೆದುಕೊಂಡರೂ ಧೃತಿಗೆಡದ ಮಹಿಳೆಯರು ತಾವು ದುಡಿದು ಕುಟುಂಬಕ್ಕೆ ಆಸರೆಯಾಗಿದ್ದಾರೆ. ಹೌದು, ಜಿಲ್ಲೆಯ ಚೇರ್ಕಾಡಿ ಪೇತ್ರಿಯ ಸಮೃದ್ಧಿ ಸಂಜೀವಿನಿ ಸ್ವಸಹಾಯ ಸಂಘದ ಮುಖಾಂತರ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಲಾಕ್ಡೌನ್ ಘೋಷಣೆಯಾದಾಗ ಸ್ತ್ರೀ ಶಕ್ತಿ ಸಂಘಗಳು ಕೂಡ ಸಮಸ್ಯೆಯಲ್ಲಿ ಸಿಲುಕಬೇಕಾಯಿತು. ಆದಾಯದ ಮೂಲಕ್ಕೆ ಹೊಡೆತ ಬಿದ್ದು ಸಾಕಷ್ಟು ಸಂಘ ಸಂಸ್ಥೆಗಳು ಇನ್ನಿಲ್ಲದಂತೆ ಕಷ್ಟಕ್ಕೆ ಸಿಲುಕಿದ್ದವು. ಆದರೆ ಚೇರ್ಕಾಡಿಯ ಸಮೃದ್ಧಿ ಸಂಜೀವಿನಿ ಸಂಘದ ಮಹಿಳೆಯರು ಕೊರೋನಾ ಕಾಲದಲ್ಲಿ ಬದುಕುವ ದಾರಿ ಹುಡುಕಿಕೊಂಡಿದ್ದಾರೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಯೋಜನೆ ರೂಪುಗೊಳಿಸಿದ್ದಾರೆ. ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಸಮೃದ್ಧಿ ಸಂಸ್ಥೆ ಒತ್ತು ನೀಡಿ ವಾಟ್ಸ್ಆ್ಯಪ್ ಮೂಲಕ ನೇರ ಮಾರುಕಟ್ಟೆಯಲ್ಲಿ ಅತ್ಯಧಿಕ ಗ್ರಾಹಕರನ್ನು ಸೃಷ್ಟಿಸಿದೆ.
ಸಾಂಪ್ರದಾಯಿಕ ಮನೆ ಮದ್ದು ಬಳಸಿ ಬಾಣಂತಿ ಲೇಹ ತಯಾರಿಕೆ, ಬಟ್ಟೆಯ ಕೈಚೀಲ, ಕೀ ಚೈನುಗಳು, ನೈಸರ್ಗಿಕ ವಸ್ತುಗಳ ಹರ್ಬಲ್ ಆಯಿಲ್, ಜೂಟ್ ಬ್ಯಾಗ್, ಜೂಲಾ ಬ್ಯಾಗ್ ಹೀಗೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕೈ ತುಂಬಾ ಲಾಭ ಸಿಗದಿದ್ದರೂ ಸಮೃದ್ಧಿ ಸಂಘದ ದಿಟ್ಟ ಹೆಜ್ಜೆ ಹಲವು ಮಹಿಳೆಯರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಜಿಲ್ಲೆಯ ಇತರ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಸಮೃದ್ಧಿ ತಂಡ ಖರೀದಿಸಿ ಅವರಿಗೂ ಜೀವನ ಕಟ್ಟಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಿದೆ. ವಿಶೇಷಚೇತನ ಮಹಿಳೆಯೊಬ್ಬರು ಸಿದ್ಧಪಡಿಸಿದ ಉತ್ಪನ್ನಗಳಿಗೆ ಬೇಡಿಕೆ ಬರುವಂತೆ ಮಾಡಿದ್ದಾರೆ.
ಆನ್ಲೈನ್ ಮಾರುಕಟ್ಟೆಯನ್ನು ಸಮರ್ಥವಾಗಿ ಬಳಸಿಕೊಂಡು ಸ್ವ-ಅಭಿವೃದ್ಧಿಯ ಜೊತೆ ಸಮಾಜ ಅಭಿವೃದ್ಧಿ ಮಾಡುವ ಚಿಂತನೆಯನ್ನು ಸಮೃದ್ಧಿ ಮಹಿಳಾ ತಂಡ ಹೊಂದಿದ್ದು, ಮಾದರಿ ಕೆಲಸ ಮಾಡುತ್ತಿದೆ.