ಉಡುಪಿ: ಖಾಸಗಿ ಮತ್ತು ನರ್ಮ್ ಬಸ್ಗಳು ಈಗಾಗಲೇ ಪ್ರಯಾಣಿಕರಿಲ್ಲದೇ ನಷ್ಟದಲ್ಲಿ ಓಡುತ್ತಿವೆ. ಆದರೂ ನರ್ಮ್ ಬಸ್ಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಖಂಡರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಶಾಲಾ-ಕಾಲೇಜುಗಳು ಆರಂಭವಾದ ಮೇಲೆ ಎಲ್ಲಾ ನರ್ಮ್ ಬಸ್ಗಳು ರಸ್ತೆಗಿಳಿಯಲಿವೆ. ಪ್ರಸ್ತುತ ಕೆಲವು ಬಸ್ಗಳು ಮಾತ್ರ ಸಂಚರಿಸುತ್ತಿವೆ. ಸಾಮಾಜಿಕ ಅಂತರ ಪಾಲನೆ ಮತ್ತಿತರ ಕಾರಣಗಳಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಹಾಗಂತ ಬಸ್ಗಳನ್ನು ನಿಲ್ಲಿಸಿಲ್ಲ ಎಂದರು.
ನರ್ಮ್ ಬಸ್ಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಸಂಚರಿಸುತ್ತಾರೆ. ಶಾಲೆಗಳು ಆರಂಭವಾಗದ ಕಾರಣ ವಿದ್ಯಾರ್ಥಿಗಳಿಲ್ಲ. ಹಿರಿಯ ನಾಗರಿಕರೂ ಕಡಿಮೆ ಪ್ರಮಾಣದಲ್ಲಿ ಓಡಾಡುತ್ತಿದ್ದಾರೆ ಎಂದರು. ಖಾಸಗಿ ಬಸ್ ಮಾಲೀಕರ ಲಾಬಿಯಿಂದಾಗಿ ನರ್ಮ್ ಬಸ್ಗಳನ್ನು ಸಂಪೂರ್ಣ ನಿಲ್ಲಿಸಲು ಉಡುಪಿ ಶಾಸಕರು ಮತ್ತು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದಕ್ಕೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
ಜೂನ್ 14ರಂದು ಅಮಿತ್ ಶಾ ಅವರ ವರ್ಚ್ಯುವಲ್ ರ್ಯಾಲಿ ನಡೆಯಲಿದ್ದು, ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 5,000 ಜನರು ರ್ಯಾಲಿಯ ನೇರಪ್ರಸಾರವನ್ನು ವೀಕ್ಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು. .