ಉಡುಪಿ: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದ್ದ ಕೋಟೇಶ್ವರ ವಿ.ಎಸ್.ಎಸ್ ಸೊಸೈಟಿ ಮತದಾನ ವೇಳೆ ಕಾಂಗ್ರೆಸ್-ಬಿಜೆಪಿ ಮುಖಂಡರ ಮಧ್ಯೆ ಜಟಾಪಟಿ ಉಂಟಾಗಿದ್ದು, ಜಗಳ ಬಿಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಚುನಾವಣೆ ನಡೆಯುತ್ತಿದ್ದ ಸ್ಥಳದ 150 ಮೀಟರ್ ದೂರದಲ್ಲಿ ಖಾಸಗಿ ಹಾಲ್ ನಲ್ಲಿ ಕಾಂಗ್ರೆಸ್ ಬೂತ್ ನಿರ್ಮಾಣ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಬೂತ್ ಶಟರ್ಸ್ ಮುಚ್ಚಿಸಿದರು. ಇದರಿಂದ ಕೆರಳಿದ ಕಾಂಗ್ರೆಸ್ ಮುಖಂಡರು ಅಕ್ರೋಶ ವ್ಯಕ್ತಪಡಿಸಿದರು.
ಸೊಸೈಟಿಗೆ 20 ವರ್ಷಗಳ ಬಳಿಕ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಸರ್ವಾನುಮತದಿಂದ ಈವರೆಗೆ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಆದರೆ ಕಾಂಗ್ರೆಸ್ಗೆ ತೀವ್ರ ಸ್ಪರ್ಧೆ ಮೂಲಕ ಉತ್ತರ ನೀಡಲು ಬಿಜೆಪಿ ನಿರ್ಧರಿಸಿತ್ತು. ಸದ್ಯ ಚುನಾವಣಾ ಬೂತ್ ಗೆ ಸಂಬಂಧಪಟ್ಟಂತೆ ಈ ಘಟನೆ ನಡೆದಿದ್ದು, ಜಗಳ ಬಿಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.