ಉಡುಪಿ : ಅದು ಮೊನ್ನೆ ಜುಲೈ 12.. ಉಡುಪಿ ಜಿಲ್ಲೆ ಬ್ರಹ್ಮಾವರದ ಫ್ಲಾಟ್ನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಇದು ವಿಶಾಲ ಗಾಣಿಗ ಎಂಬುವವರ ಶವ ಎಂದು ಗೊತ್ತಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ತನಿಖೆ ಆರಂಭಿಸಿದ್ದರು.
ಅಂತೆಯೇ ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ 4 ತಂಡ ರಚಿಸಲಾಗಿತ್ತು. ಚಿನ್ನ, ಹಣ ದರೋಡೆ ಉದ್ದೇಶದಿಂದ ಕೊಲೆಯಾಗಿದೆ ಎಂಬ ಸಂಶಯವಿತ್ತು. ಆದರೆ, ಬಲವಾದ ಸುಳಿವಿನ ಆಧರಿಸಿ ಆರೋಪಿ ಸ್ವಾಮಿನಾಥನನ್ನು ಯುಪಿಯ ಗೋರಖ್ಪುರದಲ್ಲಿ ಬಂಧಿಸಿದಾಗಲೇ, ಇದು ಸುಪಾರಿ ಕೊಲೆ ಅನ್ನೋದು ಬಯಲಾಗಿತ್ತು. ಹಾಗೇ ಮೃತ ಮಹಿಳೆಯ ಪತಿ ರಾಮಕೃಷ್ಣ ಗಾಣಿಗ ಎಂಬಾತನೇ ಸುಪಾರಿ ಕೊಟ್ಟಿದ್ದ ಎಂಬ ಅಚ್ಚರಿಯ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ.
ಕೊಲೆಯಾದ ವಿಶಾಲ, ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದವರು. ತನ್ನ ಆರು ವರ್ಷದ ಮಗಳ ಜತೆ ಕೆಲ ದಿನದ ಹಿಂದೆಷ್ಟೇ ದುಬೈನಿಂದ ತವರಿಗೆ ಬಂದಿದ್ದರು. ಹೆತ್ತವರ ಜತೆಗೆ ಬ್ರಹ್ಮಾವರದ ಫ್ಲ್ಯಾಟ್ನಲ್ಲಿದ್ದರು. ಅವತ್ತು ಕೊಲೆಯಾದ ದಿನ ಜುಲೈ 12ರಂದು ಬೆಳಿಗ್ಗೆ ತಂದೆ-ತಾಯಿ ಮತ್ತು ಮಗಳನ್ನು ಕುಂದಾಪುರದ ಗುಜ್ಜಾಡಿಯ ಮೂಲ ಮನೆಗೆ ಬಿಟ್ಟು, ಮತ್ತೆ ತಾವು ಬ್ರಹ್ಮಾವರಕ್ಕೆ ವಿಶಾಲ ವಾಪಸ್ಸಾಗಿದ್ದರು. ಆದರೆ, ಆಮೇಲೆ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಅತ್ತ ಬ್ಯಾಂಕ್‌ಗೂ ಹೋಗಿರಲಿಲ್ಲ. ಗಾಬರಿಯಿಂದ ಹೆತ್ತವರು ಫ್ಲ್ಯಾಟ್‌ಗೆ ಬಂದು ನೋಡಿದಾಗ ಶವವಾಗಿ ಪತ್ತೆಯಾಗಿತ್ತು.
ಓದಿ: ಯುವತಿಯರಿಗೆ ನಡುರಸ್ತೆಯಲ್ಲೇ ಕಿರುಕುಳ ನೀಡಿದ ಪುಂಡರು... ವಿಡಿಯೋ ವೈರಲ್
ಪತ್ನಿ ವಿಶಾಲಳ ಕೊಲೆಗೆ ದುಬೈನಲ್ಲಿ ಕೂತೇ 6 ತಿಂಗಳ ಹಿಂದೆನೇ ಆರೋಪಿ ಪತಿ ರಾಮಕೃಷ್ಣ ಸ್ಕೆಚ್ ಹಾಕಿದ್ನಂತೆ. ಸುಪಾರಿ ಕಿಲ್ಲರ್ಸ್‌ಗೆ 2 ಲಕ್ಷಕ್ಕೂ ಅಧಿಕ ಹಣ ನೀಡಿದ್ದನಂತೆ. ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಾಗ ವಿಶಾಲಳಿಗೆ ಸುಪಾರಿ ಕಿಲ್ಲರ್ಸ್‌ನ ತನ್ನ ಸ್ನೇಹಿತರೆಂದು ಪರಿಚಯಿಸಿದ್ನಂತೆ. ಮಡದಿ ವಿಶಾಲ ಬ್ರಹ್ಮಾವರದಲ್ಲಿ ಕೊಲೆಯಾದ್ರೆ, ತಾನು ಆಗ ದುಬೈನಲ್ಲಿರ್ತೀನಿ. ಸಿಕ್ಹಾಕಿಕೊಳ್ಳಲ್ಲ ಅಂತಾ ಪ್ಲಾನ್ ಏನೋ ಮಾಡ್ಕೊಂಡಿದ್ದ. ಹಾಗಾಗಿಯೇ, ಕಿಲ್ಲರ್ಸ್‌ನ ಅವತ್ತು ಫ್ಲ್ಯಾಟ್‌ಗೆ ಕಳುಹಿಸಿದ್ದ ಪತಿ ರಾಮಕೃಷ್ಣ, ಅವರಿಗೆ ಪಾರ್ಸಲ್ ಕೊಡುವಂತೆ ಫೋನ್ ಮಾಡಿದ್ದ. ಹಾಗೇ ಪಾರ್ಸೆಲ್ ಪಡೆಯಲು ಬಂದವರು, ಪತ್ನಿಯ ಕಥೆ ಮುಗಿಸಿದ್ರು.
ಓದಿ: 'ಆನ್‌ಲೈನ್ ಹುಡುಗಿ' ಜೊತೆ 'ಚಾಟ್ ಮಸಾಲ': 11 ಲಕ್ಷ ರೂಪಾಯಿ ಕಳ್ಕೊಂಡ 77ರ ವೃದ್ಧ!
ಆರೋಪಿ ರಾಮಕೃಷ್ಣನಿಗೆ ಅಕ್ರಮ ಸಂಬಂಧವಿತ್ತಂತೆ. ಅದು ಗಂಡ-ಹೆಂಡ್ತಿ ಮಧ್ಯೆ ಕಲಹಕ್ಕೂ ಕಾರಣವಾಗಿತ್ತಂತೆ. ಇದರ ಜತೆಗೇ ಆಸ್ತಿ ಕದನವೂ ಸೇರಿ ರಾಮಕೃಷ್ಣ, ತಾನೇ ತನ್ನ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದನಂತೆ. ಆದ್ರೀಗ, ತಾನೇ ಮಾಡಿದ ತಪ್ಪಿಗೆ ಪತಿ ಕಂಬಿ ಎಣಿಸುತ್ತಿದ್ದಾನೆ.