ಉಡುಪಿ: ಸಂಚಾರಿ ನಿಯಮ ಬಿಗಿಗೊಂಡಿರುವ ಹಿನ್ನೆಲೆಯಲ್ಲಿ ಕೆಲವೆಡೆ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷಾಂತರ ರೂ. ದಂಡವನ್ನೂ ಕೂಡ ವಿಧಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಂದಲೇ ಕಾಯ್ದೆ ಉಲ್ಲಂಘನೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇಂದು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕ್ರಮವಿತ್ತು. ನಗರಕ್ಕೆ ಆಗಮಿಸುವಾಗ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರು ಸೀಟ್ ಬೆಲ್ಟ್ ಹಾಕದಿರುವುದು ಕಂಡುಬಂದಿದೆ. ಹಾಗೆಯೇ ಅವರ ಜೊತೆ ಇದ್ದ ಶಾಸಕ ಸುನೀಲ್ ಕುಮಾರ್ ಕೂಡಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದರು. ಆದ್ರೆ ಟ್ರಾಫಿಕ್ ಪೊಲೀಸರು ಇವರಿಗೆ ದಂಡ ಹಾಕಿಲ್ಲ ಎನ್ನಲಾಗಿದೆ.
ಹಾಗೆಯೇ ಇದೇ ವೇಳೆ ನಗರದಲ್ಲಿ ರಾಜ್ಯಾಧ್ಯಕ್ಷರ ಮೆರವಣಿಗೆ ಸಂದರ್ಭದಲ್ಲಿಯೂ ಕೂಡ ಅವರ ವಾಹನ ಚಾಲಕ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿರುವುದು ಕಂಡುಬಂದಿದೆ. ನಗರದಾದ್ಯಂತ ಸಂಚರಿಸಿದರೂ ಪೊಲೀಸರು ದಂಡ ಹಾಕುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.