ಉಡುಪಿ : ಅದಾನಿ ನೇತೃತ್ವದ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಮತ್ತೆ ಸಂತ್ರಸ್ತರ ಕಟಕಟೆಯಲ್ಲಿ ಬಂದು ನಿಂತಿದೆ. ಉದ್ಯೋಗದ ಭರವಸೆ ಕೊಟ್ಟು ಭೂಸ್ವಾಧೀನ ಮಾಡಿಕೊಂಡಿದ್ದ ಕಂಪನಿ ಸ್ಥಳೀಯ ಯುವಕರಿಗೆ ವಂಚಿಸಿದ ಆರೋಪ ಹೊತ್ತಿದೆ. ಉದ್ಯೋಗದ ಆಸೆಗೆ ಕೃಷಿ ಬಿಟ್ಟವರು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಉಡುಪಿಯ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ವಿವಾದಗಳ ಸುಳಿಯಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿ. ಇದೀಗ ಮತ್ತೊಂದು ವಿವಾದ ಈ ಕಂಪನಿಯ ಸುತ್ತ ಸುತ್ತಿಕೊಂಡಿದೆ. ಎಲ್ಲವೂ ನಿರೀಕ್ಷೆಯಂತೆಯೇ ಆಗಿದ್ದರೆ ಯುವಕರು ಯುಪಿಸಿಎಲ್ ಕಂಪನಿಯಲ್ಲಿ ಉದ್ಯೋಗಿಗಳಾಗಿ ಇರಬೇಕಿತ್ತು.
ಶೈಕ್ಷಣಿಕ ಅರ್ಹತೆಗೆ ಯೋಗ್ಯವಾದ, ಉದ್ಯೋಗದ ಭರವಸೆ ಕೊಟ್ಟು ಹಲವು ಕುಟುಂಬಗಳಿಂದ ಫಲವತ್ತಾದ ಕೃಷಿಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಕೃಷಿಭೂಮಿಯನ್ನು ಮಾರಿ ಐದು ವರ್ಷ ಕಳೆದರೂ ಉದ್ಯೋಗ ಮಾತ್ರ ಮರೀಚಿಕೆಯಾಗಿದೆ. ಬಹುತೇಕ ಯುವಕರ ವಯಸ್ಸು ಮೀರುತ್ತಾ ಬಂದಿದೆ.
ಭೂ ಸ್ವಾಧೀನ ಮಾಡಿಕೊಂಡು ಎರಡೇ ವರ್ಷಗಳಲ್ಲಿ ಉದ್ಯೋಗ ನೀಡುವುದಾಗಿ ಕಂಪನಿ ಹೇಳಿತ್ತು. ಈಗ ಐದು ವರ್ಷವಾದ್ರೂ ಯುಪಿಸಿಎಲ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ಉದ್ಯೋಗ ವಂಚಿತ ಯುವಕರು ಆಕ್ರೋಶಗೊಂಡಿದ್ದಾರೆ.
ಓದಿ-ವಾಟ್ಸ್‌ಆ್ಯಪ್ ಪ್ರೈವಸಿ.. ನಾಗರಿಕರ ಗೌಪ್ಯತೆ ಸರ್ಕಾರದ ಜವಾಬ್ದಾರಿ..
ಇಷ್ಟಕ್ಕೂ ಯುಪಿಸಿಎಲ್ ಕಾಂಜಿಪಿಂಜಿ ಕಂಪನಿಯಲ್ಲ. ಈ ದೇಶದ ಪ್ರತಿಷ್ಠಿತ ಉದ್ಯಮಿ ಅದಾನಿ ನೇತೃತ್ವದಲ್ಲಿ ವಿದ್ಯುತ್ ಸ್ಥಾವರ ಕಾರ್ಯಾಚರಿಸುತ್ತಿದೆ. ಮೊದಲನೇ ಹಂತದಲ್ಲಿ ಸಾವಿರದ ಇನ್ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಈಗಾಗಲೇ ಆರಂಭವಾಗಿದೆ. ಯೋಜನೆ 2ನೇ ಹಂತಕ್ಕೆ ವಿಸ್ತರಣೆಗೊಳ್ಳುವ ಸೂಚನೆ ಇತ್ತು.
1, 600 ಮೆಗಾವ್ಯಾಟ್ ಸಾಮರ್ಥ್ಯದ 2ನೇ ಹಂತದ ಯೋಜನೆಗೆ ಕೆಐಎಎಡಿಬಿ ಮೂಲಕ ಕಂಪನಿ ಹೆಚ್ಚುವರಿ ಭೂಮಿ ವಶಕ್ಕೆ ಪಡೆದಿತ್ತು. ಈ ವೇಳೆ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗದ ಭರವಸೆ ನೀಡಲಾಗಿದೆ. ಆದ್ರೆ, ಐದು ವರ್ಷ ಕಳೆದ್ರೂ 2ನೇ ಹಂತದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿಲ್ಲ. ಹಾಗಾಗಿ, ಭರವಸೆ ನೀಡಿದಂತೆ ಉದ್ಯೋಗ ನೀಡಲು ಕಂಪನಿಗೆ ಸಾಧ್ಯವಾಗಿಲ್ಲ.
ಭೂಸ್ವಾಧೀನ ಮಾಡಿಕೊಂಡ ಭೂಪ್ರದೇಶವು ಫಲವತ್ತಾದ ಕೃಷಿಭೂಮಿಯಾಗಿದ್ದು, ಸದ್ಯ ಕಂಪನಿಯ ಬಳಕೆಗೂ ಸಿಗದೇ ರೈತರ ಉಪಯೋಗಕ್ಕೂ ಬಾರದೆ ಪಾಳು ಬಿದ್ದಿದೆ. ಕೊಟ್ಟ ಭರವಸೆ ಉಳಿಸಿಕೊಂಡು ಶ್ರೀಘ್ರ ನಮ್ಮನ್ನು ಕಂಪನಿಗೆ ನೇಮಕ ಮಾಡಿ ಎಂದು ಉದ್ಯೋಗದ ನಿರೀಕ್ಷೆಯಲ್ಲಿರುವ 34 ಕುಟುಂಬಗಳು ಆಗ್ರಹಿಸಿವೆ.
ಇತ್ತ, ಉಡುಪಿ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಮಾತುಕತೆಯಲ್ಲಿ ಕಳೆದುಕೊಂಡ ಭೂಮಿಗೆ ಪರಿಹಾರ ಮತ್ತು ವಾಸ್ತವ್ಯದ ಮನೆ ಇದ್ದ ಕುಟುಂಬಗಳಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಭೂ ಪರಿಹಾರವೇನೋ ಸಿಕ್ಕಿದೆ. ಆದರೆ, ಕೃಷಿಭೂಮಿ ಮಾರಿಕೊಂಡ ಕಾರಣ ಸಂಪಾದನೆ ಇಲ್ಲದೆ ಈ ಕುಟುಂಬಗಳು ಕಂಗಾಲಾಗಿವೆ.