ಉಡುಪಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭೂಮಾಪನಾ ಇಲಾಖೆಯ ಸರ್ವೇಯರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೇಲಧಿಕಾರಿಗಳ ಮೇಲೆ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
22 ವರ್ಷಗಳಿಂದ ಉಡುಪಿ ಭೂಮಾಪನಾ ಇಲಾಖೆಯಲ್ಲಿ ಸರ್ವೇಯರ್ ಆಗಿದ್ದ ಕೊಪ್ಪಳ ಮೂಲದ ಅಶೋಕ್ ಎಂಬುವರೇ ಆತ್ಮಹತ್ಯೆಗೆ ಶರಣಾದವರು. ಈ ಬಗ್ಗೆ ಅವರು ತಾನು ಇಚ್ಛೆಯಿಂದ ಸಾಯುತ್ತಿದ್ದೇನೆ, ಆಫೀಸ್ನವರ ಕಿರುಕುಳವೇ ಕಾರಣವಾಗಿದೆ ಎಂದು ಡೆತ್ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಭಾನುವಾರ ಅಜ್ಜಾರಕಾರು ಪಾರ್ಕ್ ಬಳಿ ಸಂಜೆ 4 ಗಂಟೆಯ ವೇಳೆಗೆ ಅಶೋಕ್ ನರಳುತ್ತಾ ಬಿದ್ದಿದ್ದರು. ಬಳಿಕ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಶೋಕ್ ಮೃತಪಟ್ಟಿದ್ದಾರೆ.
ಕಳೆದ 22 ವರ್ಷಗಳಿಂದ ಉಡುಪಿ ಜಿಲ್ಲೆಯ ಭೂಮಾಪನಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ನಂತರ ಫೀಲ್ಡ್ ವರ್ಕ್ನಿಂದ ಮುಕ್ತಗೊಳಿಸಿ, ಇವರನ್ನು ಕಚೇರಿ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಇತ್ತೀಚೆಗೆ ಕಚೇರಿಯ ರೆಕಾರ್ಡ್ ರೂಂನಿಂದ ಸ್ವೀಕೃತಿ ವಿಭಾಗಕ್ಕೆ ವರ್ಗಾಯಿಸಲಾಯ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ಅಶೋಕ್, ಮೇಲಧಿಕಾರಿಗಳ ಕಿರುಕುಳ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ. ಮೃತದೇಹವನ್ನು ಕೊಪ್ಪಳಕ್ಕೆ ಕಳುಹಿಸಿಕೊಡಲಾಗಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.