ಉಡುಪಿ: ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಿಲ್ಲೆಯ ಕುಂದಾಪುರ ನಿವಾಸಿ ಹರೀಶ್ ಬಂಗೇರ್ ಎಂಬ ವ್ಯಕ್ತಿಯನ್ನು ಬಂಧಮುಕ್ತಗೊಳಿಸಿ ಮನೆಗೆ ಬರುವಂತೆ ಮಾಡಿ ಎಂದು ಕುಟುಂಬಸ್ಥರು ಗೋಗರೆಯುತ್ತಿದ್ದಾರೆ.
ಕುಂದಾಪುರ ನಿವಾಸಿ ಹರೀಶ್ ಬಂಗೇರ್ ಕಳೆದ ಕೆಲ ವರ್ಷಗಳಿಂದ ಸೌದಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆಯ ವಿರುದ್ಧ ಹರೀಶ್ ಫೇಸ್ ಬುಕ್‌ನಲ್ಲಿ ಡಿ. 19 ರಂದು ಹಾಕಿದ್ದರು.
ನಂತರ ಈ ವಿಚಾರವಾಗಿ ಅವರು ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾರೆ. ಮರುದಿನ ಡಿ. 20 ರಂದು ಹರೀಶ್ ಬಂಗೇರ ಫೋಟೋ ಬಳಸಿ ನಕಲಿ ಐಡಿಯನ್ನು ಸೃಷ್ಟಿಸಿ ಸೌದಿಯ ದೊರೆ ಹಾಗೂ ಮೆಕ್ಕಾ ನಿಂದಿಸಿ ಪೋಸ್ಟ್ ಹಾಕಲಾಗಿದೆ. ಪೋಸ್ಟ್ ಪ್ರತಿಯನ್ನು ಸ್ಕ್ರೀನ್ ಶಾಟ್ ತೆಗೆದು, ನಕಲಿ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದರ ಸ್ಕ್ರೀನ್ ಶಾಟ್ ಎಲ್ಲ ಕಡೆಗೆ ಕಳುಹಿಸಿದ ಪರಿಣಾಮ ಹರೀಶ್ ಬಂಗೇರ ಅವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೂಡುಬಿದ್ರೆ ಮೂಲದವರಾದ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ಕುಯೇಝ್ ಎಂಬ ಇಬ್ಬರು ಅಣ್ಣ-ತಮ್ಮಂದಿರು ಹರೀಶ್ ಹೆಸರಲ್ಲಿ ನಕಲಿ ಖಾತೆ ತೆರೆದಿರುವುದಕ್ಕೆ ಸಾಕ್ಷಿ ದೊರಕಿದೆ.
ಇವರನ್ನು ಬಂಧಿಸಿ ತನಿಖೆ ನಡೆಸಿದ್ದು, ಅಬ್ದಲ್ ಹುಯೇಸ್ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ತಮ್ಮನ ಮೊಬೈಲ್‌ನಲ್ಲಿ ಅಣ್ಣನ ನಂಬರ್ನಿಂದ ಬಂಗೇರ ಹೆಸರಿನ ನಕಲಿ ಖಾತೆ ಸೃಷ್ಟಿಯಾಗಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಈ ನಕಲಿ ಖಾತೆಗೆ ಹರೀಶ್ ಅವರ ಫೋಟೋವನ್ನ ಅಬ್ದುಲ್ ಹುಯೇಸ್ ಬಳಸಿದ್ದಾನೆ.
ಬಂಧನವಾದ 6 ತಿಂಗಳ ನಂತರ ಹರೀಶ್ ಅವರನ್ನು ಅಲ್ಲಿಯ ಸ್ಥಳೀಯ ಆಯೋಗಕ್ಕೆ ಹಸ್ತಾಂತರಿಸಲಾಗಿದೆ. ಆಯೋಗದವರ ಮುತುವರ್ಜಿಯಲ್ಲಿ ಹರೀಶ್ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹರೀಶ್ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.
ಹಾಗೂ ಇಬ್ಬರೂ ಆರೋಪಿಗಳು ಭಾರತದವರಾಗಿದ್ದಾರೆ ಎಂದು ಉಡುಪಿ ಸೆನ್ ಪೊಲೀಸರು ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಅದು ದಿಲ್ಲಿಯ ಸಂಭಂದಪಟ್ಟ ಸಚಿವಾಲಯಕ್ಕೆ ತಲುಪಿದೆ. ಆದರೆ, ಅಲ್ಲಿಂದ ಸೌದಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಬಗ್ಗೆ ಮಾಹಿತಿ ಯಾರಿಗೂ ಇಲ್ಲ.
ಹರೀಶ್ ಅವರಿಗೆ ಪುಟ್ಟ ಹೆಣ್ಣು ಮಗಳೊಬ್ಬಳಿದ್ದು, ಬಡತನದ ಬೇಗೆಯನ್ನು ನೀಗಿಸಿ ಮಗುವಿನ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದು ಹರೀಶ್ ಅವರು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಗಂಡ ಪರದೇಶದಲ್ಲಿ ದುಡಿದು ಊರಿಗೆ ಮರಳುತ್ತಾರೆ ಎಂದು ಕಾಯುತ್ತಿದ್ದ ಪತ್ನಿ ಸುಮನಾ ಅವರಿಗೆ ದೊಡ್ಡ ಆಘಾತ ಉಂಟಾಗಿದೆ.
ಗಂಡನ ಬಿಡುಗಡೆಗೆ ಕಾಯ್ತಾ ಇರೋ ಸುಮನಾ ಈಗಾಗಲೇ ಹಲವು ಸಂಘಟನೆಗಳ ಮೂಲಕ ಭಾರತ ಸರ್ಕಾರಕ್ಕೆ ಮಾಡುತ್ತಿರುವ ಮನವಿ ಶೀಘ್ರ ತಲುಪಲಿ ಅನ್ನುವುದೇ ನಮ್ಮ ಆಶಯ.