ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅದರ ಮುಂದುವರೆದ ಭಾಗವಾಗಿ ಇದೀಗ ಕುಂದಾಪುರ ಸರ್ಕಾರಿ ಜೂನಿಯುರ್ ಕಾಲೇಜ್ನಲ್ಲಿ ಹಿಜಾಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ.
ಪ್ರತಿದಿನದಂತೆ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಕಾಲೇಜ್ಗೆ ಬಂದಿದ್ದು, ಈ ವೇಳೆ ಅವರನ್ನ ನಿಲ್ಲಿಸಿ ಕಾಲೇಜ್ ಗೇಟ್ ಬಂದ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ಕೆಲ ಹೊತ್ತು ವಾಗ್ವಾದ ಸಹ ನಡೆದಿದೆ ಎಂದು ವರದಿಯಾಗಿದೆ.
ವಾರ್ಷಿಕ ಪರೀಕ್ಷೆಗೆ ಕೇವಲ ಎರಡು ತಿಂಗಳ ಬಾಕಿ ಇದ್ದು, ಈ ವೇಳೆ ದಿಢೀರ್ ಆಗಿ ಹಿಜಾಬ್ ಧರಿಸುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಈ ರೀತಿಯ ನಿರ್ಧಾರವನ್ನ ನಾವು ಕಾಲೇಜ್ ಸೇರಿಕೊಳ್ಳುವಾಗ ಹಾಕಿದ್ದರೆ ನಾವು ಬೇರೆ ಕಾಲೇಜ್ಗೆ ಸೇರುತ್ತಿದ್ದೆವು ಎಂದು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿರಿ: ಕೇಂದ್ರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ: ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವ
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಧರಿಸಿಕೊಂಡು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜ್ಗೆ ಬರಬೇಕು. ಕೇಸರಿ ಶಾಲು, ಹಿಜಾಬ್ ಧರಿಸಿಕೊಂಡು ಬರಲು ಅವಕಾಶವಿಲ್ಲ ಎಂದಿದ್ದಾರೆ.